‘ಸ್ವಾಭಿಮಾನಿ ನಡಿಗೆ’ ಸದ್ಯಕ್ಕೆ ಮುಂದೂಡಿಕೆ: ಕೆ.ಎಲ್. ಅಶೋಕ್
ಉಡುಪಿ, ಅ.22: ಇತ್ತೀಚೆಗೆ ನಡೆದಿದ್ದ ‘ಚಲೋ ಉಡುಪಿ’ ದಲಿತ ದಮನಿತರ ಸ್ವಾಭಿಮಾನಿ ಯಾತ್ರೆಯ ವಿರುದ್ಧ ಯುವಬ್ರಿಗೇಡ್ ಸಂಘಟನೆ ಅ.23ರಂದು ಉಡುಪಿ ಸುತ್ತಮುತ್ತ ನಡೆಸಲು ಉದ್ದೇಶಿಸಿದ್ದ ’ಕನಕ ನಡೆ’ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ದಲಿತಪರ ಸಂಘಟನೆಗಳು ಹಮ್ಮಿಕೊಂಡಿದ್ದ ಸ್ವಾಭಿಮಾನಿ ನಡಿಗೆ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಚಲೋ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಯುವಬ್ರಿಗೇಡ್ ಎನ್ನುವ ಸಂಘಟನೆ ದಲಿತ, ದಮಿನತರು ನಡೆದಾಡಿದ ಉಡುಪಿಯ ಬೀದಿಗಳನ್ನು ಸ್ವಚ್ಛ ಮಾಡುತ್ತೇವೆ ಎಂದು ಹಮ್ಮಿಕೊಂಡಿದ್ದ ಕನಕ ನಡೆ ಕಾರ್ಯಕ್ರಮವನ್ನು ಖಂಡಿಸಿ, ಸ್ವಾಭಿಮಾನಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಜಿಲ್ಲಾಡಳಿತ ‘ಕನಕ ನಡೆ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವಾಭಿಮಾನಿ ನಡಿಗೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇದಲ್ಲದೆ ಯುವಬ್ರಿಗೇಡ್ ಮುಖಂಡರು ಬಹಿರಂಗವಾಗಿ, ಸಾಮೂಹಿಕವಾಗಿ ನೀಡಿರುವ ಹೇಳಿಕೆ ಅಸ್ಪಶ್ಯತೆಯ ಆಚರಣೆಯಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು 16 ಜಿಲ್ಲೆಗಳ ಎಸ್ಪಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.