×
Ad

ಡಿಸಿ ಆದೇಶ ಪಾಲಿಸುತ್ತೇವೆ ಆದರೆ ಕಾರ್ಯಕ್ರಮ ಮುಂದುವರೆಸುತ್ತೇವೆ: ಚಕ್ರವರ್ತಿ ಸೂಲಿಬೆಲೆ

Update: 2016-10-22 18:44 IST

ಉಡುಪಿ, ಅ.22: ಯುವಬ್ರಿಗೇಡ್ ಸಂಘಟನೆಯು ಅ.23ರಂದು ಉಡುಪಿ ಕೃಷ್ಣಮಠದ ಆಸುಪಾಸಿನಲ್ಲಿ ನಡೆಸಲು ಉದ್ದೇಶಿಸಿದ್ದ ’ಕನಕ ನಡೆ’ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ನಾವು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತೇವೆ ಆದರೆ  ಕಾರ್ಯಕ್ರಮವನ್ನೂ ಮುಂದುವರೆಸುತ್ತೇವೆ ಎಂದು ಯುವಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಇದ್ದಕ್ಕಿದ್ದಂತೆ ಇಂದು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ. ಆರಂಭದಲ್ಲಿ ಕನಕನಡೆ ದಲಿತ ವಿರೋಧಿ ಎನ್ನುವ ಕೂಗು ಕೇಳಿಬಂದಿತ್ತು. ಆದರೆ ಕನಕನಡೆ ದಲಿತ ವಿರೋಧಿ ಅಲ್ಲ. ಆದರೆ ಎಡಪಂಥೀಯರೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳುತ್ತಾ ಬರುತ್ತಿದ್ದೆವು. ಆದರೆ ಅದನ್ನು ಅಲ್ಲಗಳೆಯಲಾಗಿತ್ತು. ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ಬಂದ ಪತ್ರದಲ್ಲಿ ಮಠಕ್ಕೆ ಮುತ್ತಿಗೆ ಹಾಕಲು ಎಡಪಂಥೀಯ ಸಂಘಟನೆಗಳು ಮುತ್ತಿಗೆ ಹಾಕಲು ನಿಶ್ಚಯ ಮಾಡಿವೆ ಎನ್ನುವುದು ಗುಪ್ತಚರ ಇಲಾಖೆಗೆ ಬಂದಿರುವ ವರದಿ ಎಂದು ಹೇಳಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಇದು ಸ್ಪಷ್ಟಗೊಳಿಸುತ್ತದೆ. ಒಟ್ಟಿನಲ್ಲಿ ನಮ್ಮ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎನ್ನುವ ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ ಎಂದು ಹೇಳಿದರು.

ಅಲ್ಲದೆ, ಜಿಲ್ಲಾಧಿಕಾರಿಗಳು ಕೃಷ್ಣಮಠದ ಆಸುಪಾಸಿನಲ್ಲಿ ಸ್ವಚ್ಛತೆ ಮಾಡಬಾರದು ಎಂದು ಆದೇಶ ನೀಡಿದ್ದಾರೆ.ಇದನ್ನು ಸ್ವಚ್ಛ ಮಾಡಲು ಯಾರ ಅನುಮತಿಯೂ ಅಗತ್ಯವಿಲ್ಲ. ಮಠಗಳನ್ನು, ಬೀದಿಗಳನ್ನು ಸ್ವಚ್ಛ ಮಾಡಬಾರದು ಎಂದು ನೀಡಿರುವ ಆದೇಶ ಮಠಗಳಿಗೆ ಇರುವ ಸ್ವಾತಂತ್ರವನ್ನು ಕಸಿದುಕೊಂಡಂತೆ. ಯುವಬ್ರಿಗೇಡ್‌ನ ಕಾರ್ಯಕರ್ತರು ಈಗಾಗಲೇ ಹೊರಟಿದ್ದಾರೆ. ಕಾರ್ಯಕ್ರಮದ ರೂಪುರೇಷೆ ಹೇಗಿರಬೇಕು ಎಂದು ಸ್ವಾಮೀಜಿಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದು ನಿರ್ಣಯ ಮಾಡುತ್ತೇವೆ. ಯಾವತ್ತಿಗೂ ಯುವಬ್ರಿಗೇಡ್ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಡಿಸಿಯವರು ನೀಡಿದ ಆದೇಶವನ್ನು ಪಾಲಿಸುತ್ತೇವೆ. ಆದರೆ ಕಾರ್ಯಕ್ರಮವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News