×
Ad

ರಾಜಿ ಪ್ರಕ್ರಿಯೆಯಲ್ಲಿನ ವಿಳಂಬದಿಂದ ತಮಿಳರಿಗೆ ನಿರಾಶೆ: ತಮಿಳು ಸಂಘಟನೆ

Update: 2016-10-22 19:20 IST

ಕೊಲಂಬೊ, ಅ. 22: ರಾಜಿ ಮಾತುಕತೆ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಕಾಣದೆ ಶ್ರೀಲಂಕಾದ ತಮಿಳರು ನಿರಾಶರಾಗಿದ್ದಾರೆ ಎಂದು ಬ್ರಿಟನ್‌ನ ‘ಗ್ಲೋಬಲ್ ತಮಿಳ್ ಫೋರಂ’ ಹೇಳಿದೆ.

ಅಲ್ಪಸಂಖ್ಯಾತ ಸಮುದಾಯವನ್ನು ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಭರವಸೆ ನೀಡಿರುವ ಹೊರತಾಗಿಯೂ, ತಳ ಮಟ್ಟದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ತಮಿಳು ಸಂಘಟನೆ ಅಭಿಪ್ರಾಯಪಟ್ಟಿದೆ.

‘‘ಸೇನಾ ವಾಪಸಾತಿಯಲ್ಲಿ ತುರ್ತು ಕಾಣದಿರುವುದು, ಉತ್ತರ ಮತ್ತು ಪೂರ್ವದ ಭಾಗಗಳಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ವಿಳಂಬ ದೋರಣೆ, ರಾಜಿ ಪ್ರಕ್ರಿಯೆಗಳಲ್ಲಿ ಎಲ್ಲ ಸಮುದಾಯಗಳನ್ನು ಸೇರಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳಾಗದಿರುವುದು ಹಾಗೂ ಉತ್ತರದಾಯಿತ್ವ ಮತ್ತು ಉತ್ತಮ ಆಡಳಿತಕ್ಕೆ ಸಂಬಂಧಿಸಿ ಉನ್ನತ ರಾಜಕೀಯ ನಾಯಕತ್ವದಿಂದ ಬರುತ್ತಿರುವ ಗೊಂದಲಕಾರಿ ಸಂದೇಶಗಳು- ಇವೆಲ್ಲವೂ ತಮಿಳು ಜನರಲ್ಲಿ ಸಿನಿಕತೆ ಮತ್ತು ನಿರಾಶೆಯನ್ನು ಹುಟ್ಟಿಸಿವೆ’’ ಎಂದು ಫೋರಂ ಹೇಳಿದೆ.

ಜನರ ಈ ಭಾವನೆಯನ್ನು ತುರ್ತಾಗಿ ನಿವಾರಿಸುವ ಪ್ರಯತ್ನಗಳು ನಡೆಯಬೇಕಾಗಿವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಶಾಂತಿಯುತ ಸಹಬಾಳ್ವೆಗಾಗಿ ಸಮಗ್ರ, ಯೋಜಿತ ಹಾಗೂ ಸಮನ್ವಯದಿಂದ ಕೂಡಿದ ರಾಜಿ, ನೆಮ್ಮದಿಕಾರಕ ಹಾಗೂ ಉತ್ತರದಾಯಿತ್ವ ಹೊಂದಿದ ಪ್ರಕ್ರಿಯೆಗಳು ನಡೆಯಬೇಕು ಎಂಬ ವಿಶ್ವಸಂಸ್ಥೆಯ ಅಲ್ಪಸಂಖ್ಯಾತ ವ್ಯವಹಾರಗಳ ವಿಶೇಷ ರಾಯಭಾರಿ ರೀಟಾ ಇಝಾಕ್‌ರ ಅಭಿಪ್ರಾಯವನ್ನು ಫೋರಂ ಶ್ಲಾಘಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News