ಅದಾನಿಯ ಆಸ್ಟ್ರೇಲಿಯ ಕಲ್ಲಿದ್ದಲು ಯೋಜನೆ ನಿಲ್ಲಿಸುವ ಚಳವಳಿಗೆ ವಿದೇಶಿ ನಿಧಿ?

Update: 2016-10-22 13:53 GMT

ಮೆಲ್ಬರ್ನ್, ಅ. 22: ಅದಾನಿ ಗುಂಪು ಆಸ್ಟ್ರೇಲಿಯದಲ್ಲಿ ಕೈಗೆತ್ತಿಕೊಂಡಿರುವ 21.7 ಬಿಲಿಯ ಡಾಲರ್ (1.45 ಲಕ್ಷ ಕೋಟಿ ರೂಪಾಯಿ) ಹೂಡಿಕೆಯ ಕಲ್ಲಿದ್ದಲು ಯೋಜನೆಗೆ ‘‘ವಿದೇಶದಿಂದ ನಿಧಿ ಪಡೆಯುತ್ತಿರುವ, ಸುಸಂಘಟಿತ’’ ಗುಂಪೊಂದು ಅಡಚಣೆಯೊಡ್ಡುತ್ತಿದೆ ಎಂದು ‘ವಿಕಿಲೀಕ್ಸ್’ ಬಿಡುಗಡೆ ಮಾಡಿರುವ ಹೊಸ ಇಮೇಲ್‌ಗಳು ತಿಳಿಸಿವೆ.

ಅದಾನಿಯ ಯೋಜನೆಯನ್ನು ನಿಲ್ಲಿಸಲು ಈ ಗುಂಪು ಸಾಂಪ್ರದಾಯಿಕ ಭೂಮಾಲೀಕರ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಲಾಗಿದೆ.

ಅಮೆರಿಕದ ‘ಸ್ಯಾಂಡ್ಲರ್ ಫೌಂಡೇಶನ್’ ಎಂಬ ಸಂಸ್ಥೆ ಆಸ್ಟ್ರೇಲಿಯದ ಪರಿಸರ ಗುಂಪು ‘ಸನ್‌ರೈಸ್ ಪ್ರಾಜೆಕ್ಟ್’ಗೆ ನಿಧಿ ಒದಗಿಸುತ್ತಿರುವುದನ್ನು ಸರಣಿ ಇಮೇಲ್‌ಗಳು ಬಹಿರಂಗಪಡಿಸಿವೆ. ಇದಕ್ಕೆ ಪ್ರತಿಯಾಗಿ, ಅದಾನಿಯ ಕಲ್ಲಿದ್ದಲು ಯೋಜನೆಯನ್ನು ವಿರೋಧಿಸಿದರೆ ‘‘ವಾಂಗನ್ ಮತ್ತು ಜಾಗಲಿಂಗೊ’’ ಬುಡಕಟ್ಟಿನ ಜನರಿಗೆ ಆರ್ಥಿಕ ನೆರವು ಮತ್ತು ಸ್ಕಾಲರ್‌ಶಿಪ್‌ಗಳನ್ನು ನೀಡುವ ಕೊಡುಗೆಯನ್ನು ಸನ್‌ರೈಸ್ ಪ್ರಾಜೆಕ್ಟ್ ನೀಡಿದೆ.

ಅದೂ ಅಲ್ಲದೆ, ತನ್ನ ವಿದೇಶ ನಿಧಿ ಮೂಲವನ್ನು ಆಸ್ಟ್ರೇಲಿಯದ ಸಂಸತ್ತಿನಿಂದ ಅಡಗಿಸಿಡುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಸನ್‌ರೈಸ್ ಪ್ರಾಜೆಕ್ಟ್ ಜಂಭ ಕೊಚ್ಚಿಕೊಂಡಿರುವ ಇಮೇಲ್‌ಗಳೂ ಬಹಿರಂಗವಾಗಿವೆ ಎಂದು ‘ದಿ ಆಸ್ಟ್ರೇಲಿಯನ್’ ಪತ್ರಿಕೆ ಶನಿವಾರ ವರದಿ ಮಾಡಿದೆ.

ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಬುಡಕಟ್ಟು ಪಂಗಡಗಳಿಗೆ ಹೊಂದುವ ಸಲಹೆಗಳನ್ನು ಸನ್‌ರೈಸ್ ನೀಡಿದೆ ಹಾಗೂ ‘‘ಇಡೀ ಗಲಿಲೀ ಬೇಸಿನ್ ತೈಲ ಕೈಗಾರಿಕಾ ಸಂಕೀರ್ಣ ತನ್ನ ಅಂತಿಮ ಕ್ಷಣಗಳನ್ನು ಎದುರು ನೋಡುತ್ತಿದೆ ಎಂಬುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಪ್ರಚಾರ ತಂಡದ ಅಧ್ಯಕ್ಷ ಜಾನ್ ಪೊಡೆಸ್ಟ ಅವರ ಇಮೇಲ್ ಸಂದೇಶಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಸನ್‌ರೈಸ್ ಪ್ರಾಜೆಕ್ಟ್‌ನ ‘ತೆರಿಗೆ ವಿನಾಯಿತಿ ಪಡೆದ ದತ್ತಿ ಸಂಸ್ಥೆ’ಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ‘ಹ್ಯೂಮನ್ ರೈಟ್ಸ್ ವಾಚ್’ ಎಂಬ ಇನ್ನೊಂದು ಗುಂಪು ಅದಕ್ಕೆ ಸಹಾಯ ಮಾಡಿದೆ. ‘‘ಯಾಕೆಂದರೆ, ಗಣಿ ಕಂಪೆನಿಗಳು ಲಿಬರಲ್ ರಾಜಕೀಯ ನಾಯಕರನ್ನು ಕೈವಶಮಾಡಿಕೊಂಡು ವಂಚನೆಯ ಆಟ ಆಡುತ್ತಿವೆ’’ ಎಂದು ಒಂದು ಇಮೇಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News