ಬಾಹ್ಯಾಕಾಶದಿಂದ ಭಾರತವನ್ನು ನೋಡಿ ಈ ಗಗನ ಯಾತ್ರಿಗೆ ತೀವ್ರ ಆಘಾತವಾಗಿದ್ದು ಏಕೆ ಗೊತ್ತೇ ?
ವಾಶಿಂಗ್ಟನ್, ಅ. 22: ಚೀನಾ ಮತ್ತು ಭಾರತದಲ್ಲಿರುವ ಮಾಲಿನ್ಯದ ಮಟ್ಟ ಆಘಾತಕಾರಿಯಾಗಿದೆ ಎಂದು ಬಾಹ್ಯಾಕಾಶದಲ್ಲಿ ಒಂದು ವರ್ಷ ಕಳೆದಿರುವ ಗಗನಯಾತ್ರಿ ಸ್ಕಾಟ್ ಕೆಲಿ ಹೇಳಿದ್ದಾರೆ.
‘‘ಚೀನಾ ಮತ್ತು ಭಾರತದಂಥ ಸ್ಥಳಗಳಲ್ಲಿ ಬಹುತೇಕ ಎಲ್ಲಾ ಸಮಯದಲ್ಲೂ ಮಾಲಿನ್ಯ ನೆಲೆಸಿದ್ದು, ಅಂಥ ಪ್ರದೇಶಗಳನ್ನು ನೋಡುವುದು ಆಘಾತಕಾರಿಯಾಗಿದೆ’’ ಎಂದು ಶುಕ್ರವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರೊಂದಿಗೆ ಮಾಧ್ಯಮಗಳಿಗೆ ಕಾಣಿಸಿಕೊಂಡ ಕೆಲಿ ಹೇಳಿದರು.
‘‘ಚೀನಾದ ಪೂರ್ವದ ಭಾಗ ಒಂದು ದಿನ ಮಾತ್ರ ಶುಭ್ರವಾಗಿ ಕಾಣುತ್ತಿದ್ದುದನ್ನು ನಾನು ನೋಡಿದೆ. ಅದು 2015ರ ಬೇಸಿಗೆ ಕಾಲದ ಒಂದು ದಿನ. ಆಗ ನಾನು ಬಾಹ್ಯಾಕಾಶದಲ್ಲಿದ್ದೆ. ನಾನು ಬಾಹ್ಯಾಕಾಶದಲ್ಲಿ ಒಂದು ವರ್ಷಕ್ಕೂ ಅಧಿಕ ಸಮಯವನ್ನು ಕಳೆದಿದ್ದೇನೆ. ಇಂಥ ಒಂದು ದೃಶ್ಯವನ್ನು ನಾನು ಬಾಹ್ಯಾಕಾಶದಲ್ಲಿರುವಾಗ ಅದಕ್ಕಿಂತ ಮೊದಲು ಎಂದು ನೋಡಿಲ್ಲ’’ ಎಂದರು.
‘‘ಅದಕ್ಕೆ ಕಾರಣ ನನಗೆ ಮಾರನೆ ದಿನ ಗೊತ್ತಾಯಿತು. ಚೀನಾ ಸರಕಾರ ಅಂದು ತನ್ನ ರಾಷ್ಟ್ರೀಯ ರಜಾ ದಿನದ ಹಿನ್ನೆಲೆಯಲ್ಲಿ, ಹಲವಾರು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ಮುಚ್ಚಿತ್ತು ಹಾಗೂ ದೇಶದ ಆ ಭಾಗದಲ್ಲಿ ಕಾರುಗಳ ಓಡಾಟವನ್ನು ನಿಲ್ಲಿಸಿತ್ತು. ಹಾಗಾಗಿ ಅಂದು ಆಕಾಶ ಶುಭ್ರವಾಗಿತ್ತು’’ ಎಂದು ಅಮೆರಿಕದ ಗಗನಯಾನಿ ನುಡಿದರು.
‘‘ಪರಿಸರದ ಮೇಲೆ ಎಷ್ಟೊಂದು ಪ್ರಮಾಣದ ಕೆಟ್ಟ ಪರಿಣಾಮವನ್ನು ನಾವು ಬೀರುತ್ತಿದ್ದೇವೆ ಎನ್ನುವುದು ಇದರಿಂದ ತಿಳಿಯುತ್ತದೆ. ಆದರೆ, ಅದೇ ವೇಳೆ, ಪರಿಸರದ ಮೇಲೆ ಎಷ್ಟು ಬೇಗ ನಾವು ಧನಾತ್ಮಕ ಪ್ರಭಾವವನ್ನೂ ಬೀರಬಹುದು ಎನ್ನುವುದೂ ಇದರಿಂದ ಗೊತ್ತಾಗುತ್ತದೆ. ಬಾಹ್ಯಾಕಾಶದಿಂದ ನೋಡುವಾಗ ವಾತಾವರಣ ಎನ್ನುವುದು ಅತ್ಯಂತ ತೆಳುವಾಗಿ ಹೆದರಿಕೆ ಹುಟ್ಟಿಸುವ ರೀತಿಯಲ್ಲಿರುತ್ತದೆ’’ ಎಂದರು.