ಪುತ್ತೂರು ದೇವಳ ಗದ್ದೆಯಲ್ಲಿ ವಾರದ ಸಂತೆ ಪ್ರಸ್ತಾಪಕ್ಕೆ ವಿರೋಧ

Update: 2016-10-22 15:09 GMT

ಪುತ್ತೂರು, ಅ.22: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಕುರಿತು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಶುಕ್ರವಾರ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ದೇವಾಲಯ ವಠಾರದ ಗಣೇಶೋತ್ಸವ ಸಮಿತಿಯವರು ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸುವುದರೊಂದಿಗೆ ಪುತ್ತೂರಿನ ಸಂತೆ ವಿವಾದ ಮತ್ತೆ ಮುಂದುವರಿಯುತ್ತಿದೆ.

ಪುತ್ತೂರು ಸಂತೆ ಎಪಿಎಂಸಿ ಪ್ರಾಂಗಣದಲ್ಲಿಯೇ ಆಗಬೇಕು. ಯಾವುದೇ ಕಾರಣಕ್ಕೂ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಸಂತೆ ಮಾಡಲು ಅವಕಾಶ ನಿಡಬಾರದು ಎಂದು ಆಗ್ರಹಿಸಿ ಮಹಾಲಿಂಗೇಶ್ವರ ದೇವಾಲಯ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರು ಶನಿವಾರ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

 ಪುತ್ತೂರು ಮಿನಿ ವಿಧಾನಸೌಧದ ಎದುರು ಶನಿವಾರ ಸೇರಿದ ಮಹಾಲಿಂಗೇಶ್ವರ ದೇವಾಲಯ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಪುತ್ತೂರಿನ ಎಪಿಎಂಸಿ ಪ್ರಾಂಗಣದಲ್ಲಿಯೇ ಸಂತೆ ನಡೆಯಬೇಕು. ಯಾವುದೇ ಕಾರಣಕ್ಕೂ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಆಗಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಎಪಿಎಂಸಿ ಪ್ರಾಂಗಣದಲ್ಲಿ ಒಳ್ಳೆಯ ರೀತಿಯಲ್ಲಿ ತುಂಬಾ ಜನ ಸೇರಿ ಸಂತೆ ನಡೆಯುತ್ತಿದೆ. ಹಾಗಿರುವಾಗ ಅಲ್ಲಿ ನಡೆಯುತ್ತಿರುವ ಸಂತೆಯನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸುವುದು ಸರಿಯಲ್ಲ. ರೈತರ ಸರಕನ್ನು ಮಾರುವ ಉದ್ದೇಶದಿಂದಲೇ ಸರಕಾರ ಎಪಿಎಂಸಿ ವ್ಯವಸ್ಥೆಯನ್ನು ಮಾಡಿದ್ದು, ಸಂತೆ ಅಲ್ಲಿಯೇ ನಡೆಯಬೇಕು. ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಮಾತ್ರ ಆಗಬಾರದು ಎಂದರು.

ದೇವಾಲಯದ ಗದ್ದೆಗೆ ಬಂದು ವ್ಯಾಪಾರಿಗಳು ತರಕಾರಿ, ಮೀನು, ಕೋಳಿ ಮಾರುವುದು ಸರಿಯಲ್ಲ. ದೇವಾಲಯದ ವಠಾರ ಸ್ವಚ್ಛವಾಗಿರಬೇಕು. ಒಳ್ಳೆಯ ಗಾಳಿ, ಬೆಳಕು ನೀಡುವ ವಾತಾವರಣವಿರಬೇಕು. ಶಿವನ ದೃಷ್ಟಿ ಸ್ಮಶಾನದ ಮೇಲೆ ಬೀಳುವುದು ಕಾಶಿ ಮತ್ತು ಪುತ್ತೂರಿನಲ್ಲಿ ಮಾತ್ರ. ದೇವಾಲಯದ ಎದುರಿನ ಗದ್ದೆಯಲ್ಲಿ ಸಂತೆ ವ್ಯಾಪಾರ ಮಾಡಿದರೆ ಇಲ್ಲಿನ ಮಹಾಲಿಂಗೇಶ್ವರ ದೇವರ ದೃಷ್ಟಿ ಸ್ಮಶಾನದ ಮೇಲೆ ಬೀಳುವುದು ತಪ್ಪಿಹೋಗುತ್ತದೆ. ಇದು ಪುತ್ತೂರಿಗೆ ಒಳ್ಳೆಯದಲ್ಲ ಎಂದ ಅವರು ಯಾವುದೇ ಕಾರಣಕ್ಕೂ ದೇವಾಲಯ ಗದ್ದೆಯಲ್ಲಿ ಸಂತೆ ಮಾಡಬಾರದು ಎಂದು ಒತ್ತಾಯಿಸಿದರು.

ಎಪಿಎಂಸಿ ಪ್ರಾಂಗಣದ ಸಂತೆಗೆ ಜನ ಬರುತ್ತಿಲ್ಲ ಎನ್ನುವುದು ಸುಳ್ಳು, ನಾವು ಪ್ರತೀ ವಾರವೂ ಅಲ್ಲಿಗೆ ಹೋಗುತ್ತಿದ್ದೇವೆ. ಬಹಳಷ್ಟು ಜನ ಬರುತ್ತಿದ್ದಾರೆ ಎಂದ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಕಾಂಗ್ರೆಸ್ ಮತ್ತು ಬಿಜೆಪಿಯವರು ಸಂತೆ ಎಪಿಎಂಸಿಯಲ್ಲಿ ಬೇಡ ಎನ್ನುತ್ತಿದ್ದಾರೆ. ಆದರೆ ನಾವು ಎಪಿಎಂಸಿಯಲ್ಲೇ ಆಗಬೇಕೆಂದು ಹೇಳುತ್ತಿದ್ದೇವೆ. ಇದರಲ್ಲಿ ರಾಜಕೀಯವಿಲ್ಲ ಎಂದು ಹೇಳಿದರು.

ಬಳಿಕ ಮನವಿ ಸಲ್ಲಿಸಲಾಯಿತು. ಪುತ್ತೂರು ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಮೆನೇಜರ್ ಮನವಿ ಸ್ವೀಕರಿಸಿದರು. ಮಹಾಲಿಂಗೇಶ್ವರ ದೇವಾಲಯದ ವಠಾರದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ, ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪದಾಧಿಕಾರಿಗಳಾದ ಶೀನಪ್ಪ, ನವೀನ್ ಪಡ್ನೂರು, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News