ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಪ್ರೊ.ಡಿ.ಐ. ಶಾಸ್ತ್ರಿಯವರಿಗೆ ಸನ್ಮಾನ

Update: 2016-10-22 15:18 GMT

ಪುತ್ತೂರು, ಅ.22: ಶಿಕ್ಷಕರಾದವರು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುತ್ತಾರೆ. ನಿಷ್ಠೆ ಮತ್ತು ಪ್ರಾಮಾಣಿಕೆಯಿಂದ ತಮ್ಮ ವೃತ್ತಿಯನ್ನು ನಿರ್ವಹಿಸುವ ಶಿಕ್ಷಕರು ಸಮಾಜದಲ್ಲಿ ಹೆಚ್ಚಿನ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ಅಲ್ಫ್ರೆಡ್ ಜೆ. ಪಿಂಟೊ ಹೇಳಿದ್ದಾರೆ.

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇತ್ತೀಚೆಗೆ ವಯೋನಿವೃತ್ತರಾದ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ. ಡಿ. ಈಶ್ವರ ಶಾಸ್ತ್ರಿ ಅವರನ್ನು ಶುಕ್ರವಾರ ನಡೆದ ಸಮಾರಂಭದಲ್ಲಿ ಸ್ಟಾಫ್ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರುವಲ್ಲಿ ಸದಾ ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಲಿಯೊ ನೊರೊನ್ಹ ಮಾತನಾಡಿ, ಶಿಕ್ಷಕರು ಕೇವಲ ವಿದ್ಯೆಯನ್ನು ಬೋಧನೆ ಮಾಡುವವರಾಗಿರದೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ತೊಡಗಿರಬೇಕು ಎಂದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಮಾತನಾಡಿ, ಈಶ್ವರ ಶಾಸ್ತ್ರಿಯವರು ಅತ್ಯುತ್ತಮ ವಿಷಯ ಜ್ಞಾನ ಮತ್ತು ಭಾಷಾ ಜ್ಞಾನದೊಂದಿಗೆ ಉತ್ತಮ ಮಾನವೀಯ ಗುಣಗಳನ್ನು ಹೊಂದಿದ್ದರು ಎಂದರು.

ಕಲಾ ವಿಭಾಗದ ಡೀನ್ ಪ್ರೊ.ಗಣಪತಿ ಎಸ್. ಅಭಿನಂದನಾ ಭಾಷಣ ಮಾಡಿದರು. ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ಶುಭ ಹಾರೈಸಿದರು. ಉಪ ಪ್ರಾಂಶುಪಾಲ ಪ್ರೊ.ವಿಷ್ಣು ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ಉಮಾ ಈಶ್ವರ ಶಾಸ್ತ್ರಿ ಉಪಸ್ಥಿತರಿದ್ದರು. ಸ್ಟಾಫ್ ಅಸೋಸಿಯೇಶನ್ ಅಧ್ಯಕ್ಷ ಪ್ರೊ. ಗಣೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News