ಕಾಂಗ್ರೆಸ್ ನ ಯಾವ ಶಾಸಕರೂ ಬಿಜೆಪಿ ಸೇರುವುದಿಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರು, ಅ.23: ಕಾಂಗ್ರಸ್ ಪಕ್ಷದ ಯಾವ ಶಾಸಕರೂ ಬಿಜೆಪಿ ಸೇರುವುದಿಲ್ಲ. ಆ ಪಕ್ಷ ಸೇರುವುದಿರಲಿ, ಆ ಕಡೆ ತಲೆ ಕೂಡ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಗಳು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬುದು ಯಡಿಯೂರಪ್ಪ ಅವರ ಭ್ರಮೆ ಎಂದರು.
ಸುಳ್ಳು ಹೇಳುವುದರಿಂದ ರಾಜಕೀಯವಾಗಿ ಲಾಭ ಆಗಬಹುದು ಎಂದು ಯಡಿಯೂರಪ್ಪ ಅವರು ಭಾವಿಸಿದ್ದಾರೆ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಪ್ರಯತ್ನಿಸುವುದು ಅವರಿಗೆ ಅಭ್ಯಾಸವಾಗಿದೆ ಎಂದರು.
ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಂಬಂಧ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳ ಜೊತೆ ಮಾತುಕತೆ ನಡೆಸುವಂತೆ ನಮ್ಮ ಮುಖ್ಯ ಕಾರ್ಯದರ್ಶಿ ಗಳಿಗೆ ಸೂಚಿಸಿದ್ದೇನೆ. ಆ ರಾಜ್ಯದ ಮುಖ್ಯಮಂತ್ರಿ ಗಳೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.
ನಂಜನಗೂಡು ವಿಧಾನಸಭೆ ಕ್ಷೇತ್ರಕ್ಕೆ ಮರು ಚುನಾವಣೆ ನಡೆದರೆ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತ ರೊದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಚಿವ ಮಹದೇವಪ್ಪ ಅವರ ಪುತ್ರನ ಹೆಸರನ್ನು ಮಾಧ್ಯಮಗಳು ತೇಲಿಬಿಟ್ಟಿವೆ. ಆದರೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದರು.
ಬಲಾಬಲ ಪ್ರದರ್ಶನ ಮಾಡುವ ದೃಷ್ಟಿಯಿಂದ ನಂಜನಗೂಡಿನಲ್ಲಿ ಇಂದು ಸಭೆ ನಡೆಸುತ್ತಿಲ್ಲ. ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶ್ರೀನಿವಾಸ ಪ್ರಸಾದ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಉತ್ತರಿಸುವುದು ಅನಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಚುನಾವಣೆಗಳು ಸಾಮಾನ್ಯ. ಶ್ರೀನಿವಾಸ ಪ್ರಸಾದ್ ಅವರ ರಾಜಿನಾಮೆ ಕಾರಣ ಚುನಾವಣೆ ಎದುರಾಗುತ್ತಿದೆ. ಯಾವುದೇ ಚುನಾವಣೆ ಎದುರಿಸಲು ಕಾಂಗ್ರೆಸ್ ಹಿಂದೇಟು ಹಾಕುವುದಿಲ್ಲ. ಈ ಚುನಾವಣೆ ಯಾರಿಗೂ ಪ್ರತಿಷ್ಠೆ ಅಥವಾ ಸವಾಲು ಅಲ್ಲ ಎಂದು ಸಿಎಂ ಹೇಳಿದರು.
ನಿಗಮ-ಮಂಡಳಿಗಳಿಗೆ ಇದೇ ತಿಂಗಳಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಅದಕ್ಕಾಗಿ ಇಂದು ರಾತ್ರಿ ದಿಲ್ಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದರು.
ಸಿ.ಎಂ. ಇಬ್ರಾಹಿಂರ ಆರೋಪಕ್ಕೆ ಸಿಎಂ ಕೋಪಿಸಿಕೊಳ್ಳಬಾರದು ಎಂಬ ಮಾಜಿ ಸಚಿವ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನೇನೂ ಕೋಪಿಸಿಕೊಂಡಿಲ್ಲ. ಕೆಲ ಅತೃಪ್ತರನ್ನ ಎಂದಿಗೂ ಸಮಾಧಾನಪಡಿಸಲು ಆಗಲ್ಲ ಎಂದಿದ್ದೇನೆ. ಅದು ಕೋಪವೇ ? ವಾಸ್ತವ ಹೇಳಿದ್ದೇನೆ. ಕಾಂಗ್ರೆಸ್ ಆರೋಗ್ಯ ಕುರಿತು ಇಬ್ರಾಹೀಂ ಅವರು ಸರ್ಟಿಫಿಕೇಟ್ ನೀಡುವುದು ಬೇಕಾಗಿಲ್ಲ ಎಂದರು.