×
Ad

ಏಷ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ ವಿಜೇತರಿಗೆ ಸ್ವಾಗತ

Update: 2016-10-23 18:53 IST

ಮಂಗಳೂರು,ಅ.23: ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಗೆದ್ದ ಸತೀಶ್ ಕುಮಾರ್ ಕುದ್ರೋಳಿ ಹಾಗೂ ಏಳನೆ ಸ್ಥಾನ ಪಡೆದ ವಿನ್ಸೆಂಟ್ ಕಾರ್ಲೊ ಅವರನ್ನು ರವಿವಾರ ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.

ತಾಷ್ಕೆಂಟ್‌ನಲ್ಲಿ ಅ.14ರಿಂದ 20ರವರೆಗೆ ಏಷ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು. ಈ ಕೂಟದ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸತೀಶ್ ಕುಮಾರ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಮಂಗಳೂರಿನವರೇ ಆದ ವಿನ್ಸೆಂಟ್ ಕಾರ್ಲೊ ಅವರು ಏಳನೆ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಮಂಗಳೂರಿನ ಬಾಲಾಂಜನೇಯ ಜಿಮ್‌ನ ಸದಸ್ಯರಾಗಿದ್ದು, ರಾಜ್ಯ ಅಬಕಾರಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಕುಮಾರ್ ಕುದ್ರೋಳಿ, ಕರ್ನಾಟಕದಿಂದ ಒಟ್ಟು ನಾಲ್ಕು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಭಾರತದ ವಿವಿಧ ಭಾಗಗಳಿಂದ ಒಟ್ಟು 30 ಮಂದಿ ಭಾಗವಹಿಸಿದ್ದರು. ತಾಷ್ಕೆಂಟ್‌ನ ಮೈನಸ್ ಎರಡು ಡಿಗ್ರಿ ಉಷ್ಣಾಂಶದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟದಾಯಕವಾಗಿತ್ತು. ಆದರೂ ಪರಿಸರಕ್ಕೆ ಹೊಂದಿಕೊಂಡು 120 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಖುಷಿಯಿದೆ. ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಇದೇ ಸಂದರ್ಭ ಶಾಸಕ ಜೆ.ಆರ್.ಲೋಬೊ ಹಾಗೂ ಮತ್ತಿತ್ತರರು ಸತೀಶ್ ಕುಮಾರ್ ಕುದ್ರೋಳಿ ಹಾಗೂ ವಿನ್ಸೆಂಟ್ ಕಾರ್ಲೋ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News