ದೀಪಾವಳಿ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ: ಐವನ್ ಡಿಸೋಜ
ಮಂಗಳೂರು,ಅ.23:ದೀಪಾವಳಿ ಹಬ್ಬದ ಅಂಗವಾಗಿ ಅ.29ರಂದು ನಗರದ ಕದ್ರಿ ಮಂಜುನಾಥೇಶ್ವರ ದೇವಳದ ರಾಜಾಂಗಣದಲ್ಲಿ ಗೂಡು ದೀಪ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ ಹಾಗೂ ಅಕ್ಕಿ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದರು.
ಅಂದು ಮಧ್ಯಾಹ್ನ 3 ಗಂಟೆಗೆ ದೀಪಾವಳಿ ಮತ್ತು ಭಾವೈಕ್ಯತೆ ಎನ್ನುವ ವಿಷಯದಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಿದ್ದು, ದೇವಳದ ರಾಜಾಂಗಣದಲ್ಲಿ ನಡೆಯಲಿದೆ. ಇದರಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸ್ಪರ್ಧಿಗಳಿಗೆ ತಲಾ 3 ನಿಮಿಷ ಕಾಲಾವಕಾಶ ನೀಡಲಾಗಿದೆ. ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ದೀಪಾವಳಿ ಹಬ್ಬಕ್ಕೆ ಪೂರಕವಾಗುವ ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದರು.
ಸಂಜೆ 4 ಗಂಟೆಗೆ ಗೂಡು ದೀಪ ಸ್ಪರ್ಧೆಗೆ ಚಾಲನೆ ನೀಡಲಾಗುವುದು. ಆಧುನಿಕ ಹಾಗೂ ಸಾಂಪ್ರಾದಾಯಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಸಲಿದ್ದಾರೆ. ಗೂಡು ದೀಪ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಗ್ರಾಂ. ಬಂಗಾರ ಹಾಗೂ ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಚಿನ್ನ ನೀಡಲಾಗುವುದು ಎಂದು ತಿಳಿಸಿದರು.
ಸಂಜೆ 4:30ಕ್ಕೆ ತಲಾ 5 ಕೆ.ಜಿಯಂತೆ 1,000 ಮಂದಿಗೆ ಅಕ್ಕಿ ವಿತರಿಸಲಾಗುವುದು. ಈ ಬಗ್ಗೆ ಈಗಾಗಲೇ ಅರ್ಹರಿಗೆ ಕೂಪನ್ ನೀಡಲಾಗಿದೆ. ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ವೈದ್ಯರು ನೀಡಿದ ಸಲಹೆ ಮೇರೆಗೆ ಅರ್ಹ ಫಲಾನುಭವಿಗಳಾದ 400 ಮಂದಿಗೆ ಕನ್ನಡಕ ವಿತರಿಸಲಾಗುವುದು ಎಂದರು. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಡಾ.ಅಲೋಶಿಯಸ್ ಪೌಲ್ ಡಿಸೋಜ, ಮೌಲಾನಾ ಜಾಫರ್ ಸಾಧಿಕ್ ಪೈಝಿ, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಟಿ.ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ. ಮೇಯರ್ ಹರಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಮೃತ್ ಕದ್ರಿ, ರಫೀಕ್, ನಾಗೇಂದ್ರ ಕುಮಾರ್, ಎನ್.ಪಿ.ಮನುರಾಜ್, ಭಾಸ್ಕರ್ ರಾವ್, ವಾಲ್ಟರ್ ಲೋಬೊ ಇದ್ದರು.