ಕಾರ್ನಾಡು: ಉಪ್ಪುನೀರು ತಡೆಗೋಡೆ ಕಿಂಡಿ ಅಣೆಕಟ್ಟು ಉದ್ಘಾಟನೆ

Update: 2016-10-23 13:47 GMT

ಮುಲ್ಕಿ, ಅ.23: ಇಲ್ಲಿನ ಚಿತ್ರಾಪು-ಕೊಳಚಿಕಂಬಳ ಹೊಳೆಬದಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮೀನುಗಾರಿಕಾ ಇಲಾಖೆಗೆ ಮನವಿ ಮಾಡಿ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.

ಕಾರ್ನಾಡು-ಪಡುಹಿತ್ಲು ಕೋರ್ದಬ್ಬು ದೈವಸ್ಥಾನ ಬಳಿ ರವಿವಾರ ಸಣ್ಣ ನೀರಾವರಿ ಇಲಾಖೆಯ ಅನುದಾನದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಉಪ್ಪುನೀರು ತಡೆಗೋಡೆ ಕಿಂಡಿ ಅಣೆಕಟ್ಟು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎಲ್ಲಾರೀತಿಯ ಕೃಷಿಗೆ ಪ್ರೋತ್ಸಾಹ ನೀಡಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಈ ಭಾಗದ ಪ್ರಮುಖ ಬೆಳೆ ಭತ್ತದ ಕೃಷಿ ಉಪ್ಪು ನೀರು ಹಾವಳಿಯಿಂದ ನಿಂತು ಹೋಗಿತ್ತು. ಕುಡಿಯುವ ನೀರಿನ ಬಾವಿಗಳು ಉಪ್ಪುನೀರಿನ ಹಾವಳಿಗೆ ಒಳಗಾಗಿ ತೀವ್ರ ಸಮಸ್ಯೆ ಉಂಟಾಗಿತ್ತು. ಸ್ಥಳೀಯರ ಮನವಿಯಂತೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದು, ಅತೀ ಶೀಘ್ರ ಕಾಮಗಾರಿ ನಡೆಸಲಾಗಿದೆ ಎಂದವರು.
ಅಣೆಕಟ್ಟು ನಿರ್ಮಾಣ ಬಳಿಕ ಸ್ಥಳೀಯ ಕೃಷಿಕರು ನಿರ್ವಹಣೆ ಉದ್ದೇಶದಿಂದ ಸಮಿತಿ ರಚಿಸಿರುವುದು ಉತ್ತಮ ಬೆಳವಣಿಗೆ ಎಂದ ಶಾಸಕರು, ಮುಂದಿನ ದಿನಗಳಲ್ಲಿ ಅಣೆಕಟ್ಟೆಗೆ ಜನ ಸಂಚಾರಕ್ಕೆ ಅನುಕೂಲವಾಗಲು ಕಬ್ಬಿಣದ ದಂಡೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಅಣೆಕಟ್ಟು ನಿರ್ಮಿಸಿದ ಗುತ್ತಿಗೆದಾರ ಲಾರೆನ್ಸ್, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಷಣ್ಮುಗಂರನ್ನು ಕಿಂಡಿ ಅಣೆಕಟ್ಟು ನೀರು ಮತ್ತು ಕೃಷಿಭೂಮಿ ಬಳಕೆದಾರರ ಸಂಘ ಮತ್ತು ಅಣೆಕಟ್ಟು ನಿರ್ವಹಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಮುಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಧಿಕಾ ಯಾದವ್ ಕೋಟ್ಯಾನ್, ಇಲಾಖಾ ಇಂಜಿನಿಯರ್ ದೇವಿಪ್ರಸಾದ್ ಶೆಟ್ಟಿ, ನಿರ್ವಹಣಾ ಸಮಿತಿ ಅಧ್ಯಕ್ಷ ಕೃಷ್ಣ ಆರ್. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಬಳಕೆದಾರರ ಸಂಘದ ಅಧ್ಯಕ್ಷ ಪ್ರೊ.ಸ್ಯಾಮ್ ಮಾಬೆನ್ ಸ್ವಾಗತಿಸಿ ಪ್ರಸ್ತಾವಿಸಿದರು. ಕೋಶಾಧಿಕಾರಿ ಪ್ರವೀಣ್ ಆನಂದ್ ಕಾರ್ಯಕ್ರಮ ನಿರ್ವಹಿಸಿದರು. ಯದೀಶ್ ಅಮೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News