×
Ad

ಗೃಹ ರಕ್ಷಕರಿಗೆ ಸಮಾನ ಗೌರವ: ಎಸ್ಪಿ ಭೂಷಣ್

Update: 2016-10-23 20:17 IST

ಮಂಗಳೂರು, ಅ.23:ಕಾನೂನು ಸುವ್ಯವಸ್ಥೆಗೆ ಪೊಲೀಸರೊಂದಿಗೆ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕರಿಗೆ ಇಲಾಖೆಯಿಂದ ಸಮಾನ ಗೌರವ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ ರಾವ್ ಬೊರಸೆ ಭರವಸೆ ನೀಡಿದ್ದಾರೆ.

ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ರವಿವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಗೃಹರಕ್ಷಕ ದಳದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಕೆಲಸಕ್ಕೆ ನಿಯೋಜಿಸಿದ ಸಂದರ್ಭದಲ್ಲಿ ಪೊಲೀಸರು ಮತ್ತು ಗೃಹ ರಕ್ಷಕದಳದವರು ಸಾರ್ವಜನಿಕರೊಂದಿಗೆ ಸಾಕಷ್ಟು ಸಂಯಮದಿಂದ ವರ್ತಿಸಬೇಕಾದ ಅಗತ್ಯವಿದೆ. ಪ್ರತಿ ಠಾಣೆಗಳಲ್ಲಿ ಸೋಮವಾರ ಮತ್ತು ಶುಕ್ರವಾರ ಗೃಹರಕ್ಷದಳವರು ಕವಾಯತುಗಳಲ್ಲಿ ಭಾಗವಹಿಸಿ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು .ಗೃಹ ರಕ್ಷಕರ ಸಂಭಾವನೆಯನ್ನು ಹೆಚ್ಚಿಸುವ ಪ್ರಸ್ತಾಪ ಸರಕಾರದ ಮುಂದಿದೆ ಎಂದು ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ಮಾತನಾಡುತ್ತಾ, ಜಿಲ್ಲೆಯಲ್ಲಿ ಪ್ರಸಕ್ತ 1,000 ಗೃಹರಕ್ಷರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ 26 ಸಾವಿರ ಗೃಹ ರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗೃಹರಕ್ಷಕರ ಸಂಖ್ಯೆಯನ್ನು 30 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಗೃಹ ರಕ್ಷಕರು ತಮಗೆ ನೀಡುತ್ತಿರುವ ಕನಿಷ್ಠ ಗೌರವ ಧನದ ಹೊರತಾಗಿಯೂ ದೇಶ ಸೇವೆ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ತರಬೇತಿ ನೀಡಲು ಮಾರ್ಗದರ್ಶನ ನೀಡಿದ ವಸಂತ ಕುಮಾರ್, ಅಭಿಮನ್ಯು ರೈ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾಗೃಹ ರಕ್ಷಕ ದಳದ ಉಪ ಕಮಾಂಡೆಂಟ್ ರಮೇಶ್ ಗೃಹರಕ್ಷಕದಳದ ಕ್ಯಾಂಪ್ ಬಗ್ಗೆ ವಿವರ ನೀಡುತ್ತಾ, ಅ.14ರಿಂದ 23ರವರೆಗೆ ನಗರದ ಮೆರಿಹಿಲ್ ಇನ್‌ಫೆಂಟ್ ಜೀಸಸ್ ಸ್ಕೂಲ್ ಆವರಣದಲ್ಲಿ ನಡೆದ ಗೃಹರಕ್ಷಕರ ತರಬೇತಿ ತಂಡದಲ್ಲಿ ಒಟ್ಟು 100ಜನ ಗೃಹಕರಕ್ಷಕರು ತರಬೇತಿ ಪಡೆದಿದ್ದಾರೆ. ಪ್ರಥಮ ಚಿಕಿತ್ಸೆ, ರಕ್ಷಣಾ ತರಬೇತಿ, ಅಗ್ನಿಶಾಮಕ, ಸಂಚಾರ ನಿಯಂತ್ರಣ, ವಿಪತ್ತು ನಿರ್ವಹಣೆ, ಬಂದೂಕು, ಲಾಠಿ ಬಳಕೆ ತರಬೇತಿಗಳನ್ನು ಶಿಬಿರಾರ್ಥಿಗಳಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14 ಗೃಹ ರಕ್ಷಕ ದಳಗಳ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಗೃಹ ರಕ್ಷಕ ತುಕಡಿಳಿಂದ ವಸಂತ್ ಕುಮಾರ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಕ್ಯಾಂಪ್ ಕಮಾಂಡರ್ ಉಷಾ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಸಿಕೊಟ್ಟರು. ತರಬೇತಿ ಪಡೆದ ಗೃಹಕರಕ್ಷಕರಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.

ಗೃಹ ರಕ್ಷಕ ದಳದ ಉಪ ಕಮಾಂಡೆಂಟ್ ಮುಹಮ್ಮದ್ ಇಸ್ಮಾಯೀಲ್ ವಂದಿಸಿದರು. ಬೆಳ್ತಂಗಡಿ ಘಟಕದ ಗೃಹ ರಕ್ಷಕದಳದ ಘಟಕಾಧಿಕಾರಿ ಜಯಾನಂದ ಬಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News