ಪ್ರಧಾನಿಯ ಮಹತ್ವಾಕಾಂಕ್ಷೆಯ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ವಿಳಂಬ ಸಾಧ್ಯತೆ
ಹೊಸದಿಲ್ಲಿ,ಆ.23: ಎರಡು ವರ್ಷಗಳ ಹಿಂದೆ ಪ್ರಕಟಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯು ಡಿಸೆಂಬರ್ ಗಡುವಿನೊಳಗೆ ಸಾಕಾರಗೊಳ್ಳದಿರುವ ಸಾಧ್ಯತೆಯಿದೆ. ಇಸ್ರೋ ಆ ತಿಂಗಳಲ್ಲಿ ತನ್ನ ಜಿಎಸ್‌ಎಲ್‌ವಿ ಮಾರ್ಕ್ 3ನ್ನು ಉಡಾವಣೆ ಮಾಡುತ್ತಿರುವುದು ಇದಕ್ಕೆ ಕಾರಣ ವಾಗಿದೆ. ಇಸ್ರೋ ಪ್ರತಿ ತಿಂಗಳು ಕನಿಷ್ಠ ಒಂದು ಉಪಗ್ರಹ ಉಡಾವಣೆ ನಡೆಸುತ್ತಿದೆ. ಹೀಗಾಗಿ ನಮ್ಮ ವೇಳಾಪಟ್ಟಿಯು ಪೂರ್ಣಗೊಂಡಿದೆ.
ಈ ಕಾಲಘಟ್ಟದಲ್ಲಿ ದಿಸೆಂಬರ್‌ನಲ್ಲಿ ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆ ಕಠಿಣವೆಂಬಂತೆ ಕಂಡುಬರುತ್ತಿದೆ. ಅದು ಒಂದು ತಿಂಗಳು ವಿಳಂಬವಾಗಬಹುದು ಎಂದು ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎ.ಎಸ್.ಕಿರಣಕುಮಾರ್ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಜಿಎಸ್‌ಎಲ್‌ವಿ ಮಾರ್ಕ್ 3ರ ಉಡಾವಣೆ ದೇಶದ ಬಾಹ್ಯಾಕಾಶ ಇತಿಹಾಸದಲ್ಲಿ ನಿರ್ಣಾಯಕ ಬೆಳವಣಿಗೆಯಾಗಲಿದೆ. ಅದು ಡಿಸೆಂಬರ್ ಅಂತ್ಯಕ್ಕೆ ಉಡಾವಣೆಗೊಳ್ಳುವ ಸಾಧ್ಯತೆಯಿದೆ. ಈ ಯೋಜನೆಯು ಇಸ್ರೋ ಸುಮಾರು ನಾಲ್ಕು ಟನ್ ತೂಕದ ಉಪಗ್ರಹ ಉಡಾವಣೆ ಸಾಮರ್ಥ್ಯವನ್ನು ಹೊಂದಲು ನೆರವಾಗುತ್ತದೆ. ಅದೀಗ 2.2 ಟನ್‌ವರೆಗಿನ ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.