ಪೇಜಾವರ ಶ್ರೀ, ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಲು ಎಸ್ಪಿಗೆ ಒತ್ತಾಯ

Update: 2016-10-23 15:39 GMT

ಉಡುಪಿ, ಅ.23: ಯುವ ಬ್ರಿಗೇಡ್ ಸಂಘಟನೆ ಇಂದು ಉಡುಪಿ ರಥಬೀದಿಯಲ್ಲಿ ಕನಕ ನಡೆ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಜಿಲ್ಲಾಧಿಕಾರಿ ಆದೇಶವನ್ನು ಸ್ಪಷ್ಟ ಉಲ್ಲಂಘಸಿ ಅಸ್ಪಶ್ಯತಾ ಆಚರಣೆ ಮಾಡಿದೆ. ಆದುದರಿಂದ ಇದಕ್ಕೆ ಚಾಲನೆ ನೀಡಿದ ಪರ್ಯಾಯ ಪೇಜಾವರ ಶ್ರೀ ಹಾಗೂ ನೇತೃತ್ವ ವಹಿಸಿದ್ದ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಉಡುಪಿ ಜಿಲ್ಲಾ ದಲಿತ ದಮನಿತರ ಸ್ವಾಭಿಮಾನಿ ಸಂಘರ್ಷ ಸಮಿತಿಯು ರವಿವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.

ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಸಮಿತಿ ನಡೆಸಲು ಉದ್ದೇಶಿಸಿದ್ದ ಸ್ವಾಭಿಮಾನಿ ನಡೆಯನ್ನು ಕಾನೂನಿಗೆ ತಲೆ ಬಾಗಿ ಮುಂದೂಡಿದ್ದೇವೆ. ಆದರೆ ಯುವ ಬ್ರಿಗೇಡ್‌ನವರು ಕಾನೂನು ಮೀರಿ ಹೋಗಲ್ಲ ಎಂಬುದಾಗಿ ಹೇಳಿಕೊಂಡೇ ಇಂದು ಕನಕ ನಡೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಆದೇಶ ವನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ರಥಬೀದಿಯು ಸಾರ್ವಜನಿಕರ ರಸ್ತೆಯಾಗಿದ್ದು, ಅಲ್ಲಿದ್ದ ಕನಕನ ಮೂರ್ತಿ ಎದುರು ಭಜನೆ, ಮೂರ್ತಿಗೆ ಮಾಲಾರ್ಪಣೆ ಹಾಗೂ ಕನಕ ನಡೆ ಎಂಬ ಬ್ಯಾನರ್ ಹಿಡಿದು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಯಾವುದೇ ಅನುಮತಿ ನೀಡಿರಲಿಲ್ಲ. ಇದು ಕಾನೂನು ಉಲ್ಲಂಘನೆ ಮಾತ್ರವಲ್ಲದೆ ಅಸ್ಪಶ್ಯತಾ ಆಚರಣೆ ಕೂಡ ಆಗಿದೆ. ಆದುದ ರಿಂದ ಪೇಜಾವರ ಶ್ರೀ ಮತ್ತು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ನಾವು ಮಠಕ್ಕೆ ಮುತ್ತಿಗೆ ಹಾಕಿ ಧ್ವಂಸ ಮಾಡುವ ರೀತಿಯಲ್ಲಿ ಭಯದ ವಾತಾವರಣವನ್ನು ಸೃಷ್ಠಿಸಲಾಗಿದೆ. ಮುತ್ತಿಗೆ ಹಾಕಿದರೆ ಉಪವಾಸ ಆಚರಿ ಸುವುದಾಗಿ ಅನುಕಂಪ ಸೃಷ್ಠಿಸಿರುವ ಪೇಜಾವರ ಶ್ರೀ ದಲಿತರನ್ನು ಎತ್ತಿಕಟ್ಟುವ ಕಾರ್ಯ ಮಾಡಿದ್ದಾರೆ. ಈ ಅಸ್ಪಶ್ಯತಾ ಆಚರಣೆಯನ್ನು ಸ್ವಾಮೀಜಿ ನಿಲ್ಲಿಸ ಬಹುದಿತ್ತು. ಆದರೆ ಅವರು ಹಾಗೆ ಮಾಡದೆ ಹಿಂಬಾಗಿಲ ಮೂಲಕ ಪ್ರಚೋದನೆ ನೀಡಿದ್ದಾರೆ. ಇಂತಹ ಅಸ್ಪಶ್ಯತಾ ಆಚರಣೆಯನ್ನು ಮಠದೊಳಗೆ ಯೂ ಮಾಡುವ ಅಗತ್ಯ ಇರಲಿಲ್ಲ ಎಂದು ಅವರು ಆರೋಪಿಸಿದರು.

ಚಕ್ರವರ್ತಿ ಸೂಲಿಬೆಲೆ ತಮ್ಮ ಫೇಸ್‌ಬುಕ್‌ನಲ್ಲಿ ಉಡುಪಿ ಬೀದಿಯಲ್ಲಿ ದಲಿತರು ತಿರುಗಿ ಅದನ್ನು ನೀಲಿ ಮಾಡಿದ್ದಾರೆ, ಹಾಗಾಗಿ ಅದನ್ನು ನಾವು ಸ್ವಚ್ಛಗೊಳಿಸುತ್ತೇವೆ ಎಂಬುದಾಗಿ ಹೇಳಿಕೊಂಡಿದ್ದರು. ಇದೀಗ ಆ ಕಾರ್ಯ ಕ್ರಮಕ್ಕೆ ಪೇಜಾವರ ಶ್ರೀ ಚಾಲನೆ ನೀಡುವ ಮೂಲಕ ಅಸ್ಪಶ್ಯತೆ ಆಚರಣೆ ಯನ್ನು ಮಾಡಿದ್ದಾರೆ. ಕನಕನಿಗೆ ಮಾಲೆ ಹಾಕಲು ಅವರಿಗೆ ಅವಕಾಶ ಕೊಟ್ಟಿದ್ದೀರಿ. ಅದೇ ರೀತಿ ನಮಗೂ ನೀಡಬೇಕು ಎಂದು ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ ಆಗ್ರಹಿಸಿದರು.

ಮೊದಲು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾತ್ಮಕವಾಗಿ ಮಾತನಾಡು ತ್ತಿದ್ದ ಚಕ್ರವರ್ತಿ ಸೂಲಿಬೆಲೆ ಈಗ ದಲಿತರ ವಿರುದ್ಧ ಎತ್ತಿಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಸೂಲಿಬೆಲೆ ಹಾಗೂ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‌ಗೆ ಉಡುಪಿ ಜಿಲ್ಲೆ ಪ್ರವೇಶಿಸಿದಂತೆ ನಿರ್ಬಂಧ ಹೇರಬೇಕು ಎಂದು ಅವರು ಆಗ್ರಹಿಸಿದರು.

ಕನಕ ನಡೆ ಕಾರ್ಯಕ್ರಮದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪೌರ ಕಾರ್ಮಿಕರು ಎಂದು ಹೇಳಿ ಸನ್ಮಾನ ಮಾಡಲಾಗಿದೆ. ಇದರ ವಿರುದ್ಧ ಬಾಲ ಕಾರ್ಮಿಕ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು. ಅಲ್ಲದೆ ಸ್ವಾಮೀಜಿ ಪೌರ ಕಾರ್ಮಿಕರಿಗೆ ಅವಮಾನಿಸುವ ರೀತಿಯಲ್ಲಿ ಸನ್ಮಾನ ಮಾಡಿದ್ದಾರೆ ಎಂದು ದಲಿತ ಮುಖಂಡ ಸುಂದರ ಕಪ್ಪೆಟ್ಟು ದೂರಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಹುಸೇನ್ ಕೋಡಿಬೆಂಗ್ರೆ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ದಿನಕರ ಬೆಂಗ್ರೆ, ಎಸ್.ಎಸ್.ಪ್ರಸಾದ್, ವಿಠಲ ತೊಟ್ಟಂ, ಶಂಭು ಸುವರ್ಣ, ಪರಮೇಶ್ವರ ಉಪ್ಪೂರು, ವಾಸು ನೇಜಾರು, ಯುವರಾಜ್ ಮೊದಲಾದವರು ಉಪಸ್ಥಿತರಿದ್ದರು.

ಪರಿಶೀಲಿಸಿ ಜಿಲ್ಲಾಧಿಕಾರಿಯಿಂದ ಕ್ರಮ: ಎಸ್ಪಿ

ಕನಕನಡೆಗೆ ಅನುಮತಿ ನೀಡಿರುವ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಆದೇಶದ ಉಲ್ಲಂಘನೆಯನ್ನು ಪರಿಶೀಲಿಸಿ ಕ್ರಮ ತೆಗೆದು ಕೊಳ್ಳುತ್ತಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ದಲಿತ ದಮನಿತರ ಸ್ವಾಭಿಮಾನಿ ಸಂಘರ್ಷ ಸಮಿತಿಯ ಮನವಿಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಅನುಮತಿ ನೀಡಿರುವ ಜಿಲ್ಲಾ ಧಿಕಾರಿಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕು. ನ್ಯಾಯಾ ಲಯ ನೀಡುವ ಆದೇಶದಂತೆ ನಮಗೆ ಸೆಕ್ಷನ್ 188ನಂತೆ ಪ್ರಕರಣ ದಾಖಲಿಸಲು ಅವಕಾಶ ಇದೆ. ಹಾಗಾಗಿ ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ಎಂದು ತಿಳಿಸಿದರು.

ಕನಕ ನಡೆ ಕಾರ್ಯಕ್ರಮದ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಅದಕ್ಕಾಗಿ 17 ಕೆಮರಾಗಳನ್ನು ಅಳವಡಿಸಲಾಗಿತ್ತು. ಈ ಕುರಿತು ಸಂಪೂರ್ಣ ದಾಖಲೆಯನ್ನು ನಾವು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಇದರಲ್ಲಿ ಆದೇಶದ ಉಲ್ಲಂಘನೆಯಾಗಿರುವುದು ಕಂಡುಬಂದರೆ ಜಿಲ್ಲಾಧಿ ಕಾರಿಗಳು ಮುಂದಿನ ಕ್ರಮ ಜರಗಿಸಲಿದ್ದಾರೆ ಎಂದು ಅವರು ಹೇಳಿದರು.

ಡಿಸಿಗೆ ಮನವಿ

ಕನಕ ನಡೆಯಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದ್ದು. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಪೇಜಾವರ ಸ್ವಾಮೀಜಿ ಕಾನೂನು ಉಲ್ಲಂಘಿಸಿ ನಡೆಸಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜನ ಸಾಮಾನ್ಯರ ಮನಸ್ಸಿಗೆ ನೋವಾಗುವಂತೆ ವರ್ತಿಸಿದ್ದಾರೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News