ಸಮುದಾಯ ಭವನ ಸ್ವಾಭಿಮಾನದ ಸಂಕೇತ: ಸಚಿವ ಪ್ರಮೋದ್

Update: 2016-10-23 15:55 GMT

ಮಣಿಪಾಲ, ಅ.23: ದೇವರನ್ನು(ದೇವಸ್ಥಾನ) ಕೇಂದ್ರೀಕರಿಸಿ ಸಮಾಜ ಸಂಘಟಿಸಿದಾಗ ಯಾವುದೇ ಪ್ರತಿರೋಧವಿಲ್ಲದೆ ಸಂಘಟನೆ ಬೆಳೆಯುತ್ತದೆ. ಸಮುದಾಯ ಭವನ ಎಲ್ಲಾ ಚಟುವಟಿಕೆಗಳಿಗೆ ಪ್ರಚೋದನಾಶಕ್ತಿ ನೀಡುತ್ತದೆ. ಇದು ಸಮಾಜದ ಸ್ವಾಭಿಮಾನ ಹಾಗೂ ಶಕ್ತಿಯ ಸಂಕೇತ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬಂಟಕಲ್ಲು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ ರವಿವಾರ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಆಯೋಜಿಸಲಾದ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿ ಭಾನ್ವಿತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಮುದಾಯದ ಎಲ್ಲರಿಗೂ ಶಿಕ್ಷಣ ದೊರೆತಾಗ ಬಲಿಷ್ಟ ಸಮಾಜದ ನಿರ್ಮಾಣವಾಗುತ್ತದೆ. ವಿದ್ಯಾರ್ಥಿವೇತನ ವಿತರಣೆ, ಬಡರೋಗಿಗಳಿಗೆ ಸಹಾಯಧನ, ಸಾಧಕರಿಗೆ ಸನ್ಮಾನ ಕಾರ್ಯಗಳು ಸಮಾಜವನ್ನು ಸದೃಢಗೊಳಿ ಸುತ್ತವೆ. ಶ್ರೀಕೈವಲ್ಯ ಮಠದ ಶಾಖೆಗೆ ಈ ಭಾಗದಲ್ಲಿ ಸರಕಾರದ ವತಿಯಿಂದ ಸ್ಥಳಾವಕಾಶ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯರ್ಲಪಾಡಿ ನಾರಾಯಣ ಗವಲ್ಕರ್(ಸಾಹಿತ್ಯ), ಬಂಟಕಲ್ಲು ಹೇರೂರು ದತ್ತಾತ್ರೇಯ ಪಾಟ್ಕರ್(ಹೈನು ಗಾರಿಕೆ), ಬಂಟಕಲ್ಲು ರಾಮಚಂದ್ರ ನಾಯಕ್(ಉದ್ಯಮ), ಶ್ರೀಕಾಂತ್ ನಾಯಕ್ ಗುರ್ನೆಬೆಟ್ಟು(ಯೋಗಗುರು), ಪ್ರೊ.ಸ್ವರ್ಣಲತಾ (ಡಾಕ್ಟರೇಟ್) ಅವರನ್ನು ಸಚಿವರು ಸನ್ಮಾನಿಸಿದರು.

ಸಂಘದ ಅಧ್ಯಕ್ಷ ಉಪೇಂದ್ರ ನಾಯಕ್, ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಗೋಕುಲ್‌ದಾಸ್ ನಾಯಕ್ ಮಾತನಾಡಿದರು. ವೇದಿಕೆಯಲ್ಲಿ ಎಂ. ನರಸಿಂಹ ನಾಯಕ್ ಮಸ್ಕತ್, ಸುಂದರ ಎಸ್.ನಾಯಕ್ ಪಾರ್ಡಿ, ಗುಜರಾತ್‌ನ ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕ ಉಪೇಂದ್ರ ಪ್ರಭು, ಶಾಂತಾರಾಮ ಸಾಲ್ವಣ್‌ಕಾರ್, ರಾಮಕೃಷ್ಣ ನಾಯಕ್, ಶ್ರೀಶ ನಾಯಕ್, ನರಸಿಂಹ ನಾಯಕ್ ಮಣಿಪಾಲ ಉಪಸ್ಥಿತರಿದ್ದರು.

ಪಾಂಡುರಂಗ ಕಾಮತ್ ವಂದಿಸಿದರು. ಕೆ.ಆರ್.ಪಾಟ್ಕರ್ ಹಾಗೂ ರಾಮದಾಸ್ ಪ್ರಭು ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News