ಮುಸ್ಲಿಮರು ಮಾತೃಧರ್ಮಕ್ಕೆ ಮರಳಿದರೆ ರಕ್ಷಣೆಯ ಆಶ್ವಾಸನೆ: ವಿಹಿಂಪ ಅಖಿಲ ಭಾರತೀಯ ಸಹ ಪ್ರಧಾನ ಕಾರ್ಯದರ್ಶಿ
ಮಂಗಳೂರು, ಅ.23: ‘‘ನಿಮ್ಮ ಪೂರ್ವಿಜರು ಹಿಂದೂ ಆಗಿದ್ದರು. ನಿಮ್ಮನ್ನು ಮೋಸ ಮತ್ತು ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗಿದೆ. ಆದ್ದರಿಂದ ನಿಮಗೆ ಭಾರತದಲ್ಲಿ ಉಳಿಯಬೇಕಾದರೆ ತಮ್ಮ ಮಾತೃ ಧರ್ಮಕ್ಕೆ ಮರಳಿ ಬನ್ನಿ. ನಿಮ್ಮ ರಕ್ಷಣೆಯ ಆಶ್ವಾಸನೆ ನೀಡುತ್ತೇನೆ’’ ಎಂದು ಭಾರತೀಯ ಮುಸ್ಲಿಮರಿಗೆ ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತೀಯ ಸಹ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರ ಕುಮಾರ್ ಜೈನ್ ಕರೆ ನೀಡಿದ್ದಾರೆ.
ಅವರು ವಿಶ್ವ ಹಿಂದೂ ಪರಿಷತ್, ಬಜರಂಗದಳ ದಕ್ಷಿಣ ಪ್ರಾಂತ ಅಧಿವೇಶನದ ಪ್ರಯುಕ್ತ ನಗರದ ಕದ್ರಿ ಮೈದಾನದಲ್ಲಿ ನಡೆದ ‘ಹಿಂದು ಜಯ ಘೋಷ್’ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮುಸ್ಲಿಮರು ರಕ್ತದಾಹಿಗಳು. ಪರಸ್ಪರರ ಮೇಲೆ ಹೊಡೆದಾಡಿಕೊಳ್ಳುವ ಅವರ ರಕ್ತದ ದಾಹ ಇನ್ನೂ ನೀಗಿಲ್ಲ. ಕೆಲವೊಮ್ಮೆ ಶಿಯಾ ಪಂಗಡದ ಹೆಸರಿನಲ್ಲಿ ರಕ್ತ ಹರಿಸಿದರೆ, ಮತ್ತೊಮ್ಮೆ ಸುನ್ನೀ ಹೆಸರಿನಲ್ಲಿ ರಕ್ತ ಹರಿಸುತ್ತಾರೆ. ಮುಸ್ಲಿಮರು ಈ ದೇಶದಲ್ಲಿ ಉಳಿಯಬೇಕಾದರೆ ಮುಹಮ್ಮದ್ ಪೈಗಂಬರ್‌ರನ್ನು ಅನುಸರಿಸದೆ, ಶ್ರೀರಾಮನ ಆರಾಧನೆ ಮಾಡುವಂತೆ ಹೇಳಿದರು.
ಟಿಪ್ಪು ಜಯಂತಿ ಆಚರಣೆಯ ರಾಜ್ಯ ಸರಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸುರೇಂದ್ರಕುಮಾರ್ ಜೈನ್, ಟಿಪ್ಪು ಜಯಂತಿ ದಿನವನ್ನು ಮೃತ್ಯು ದಿನವನ್ನಾಗಿ ಆಚರಿಸೋಣ ಎಂದು ಕರೆ ನೀಡಿದರು.
ಟಿಪ್ಪುವಿನ ಜಯಂತಿಯನ್ನು ಆಚರಿಸಲು ರಾಜ್ಯ ಸರಕಾರ ಹೊರಟಿದ್ದು ದುರ್ದೈವ. ಆತನ ಜನ್ಮದಿನದ ಖುಷಿ ಆಚರಿಸುವ ಬದಲು ಆತನ ಮರಣದ ಖುಷಿಯನ್ನು ಆಚರಿಸಬೇಕಾಗಿದೆ. ಈ ಭೂಮಿಯಲ್ಲಿ ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ. ಗೋವು ಮತ್ತು ಮಂದಿರಗಳ ರಕ್ಷಣೆ ಹಾಗೂ ಜಿಹಾದಿಗಳ ವಿರುದ್ಧ ಸರಕಾರದ ದಿಟ್ಟ ಕ್ರಮ ಕೈಗೊಳ್ಳದಿದ್ದರೆ, ಬಜರಂಗದಳದ ಕಾರ್ಯಕರ್ತರೇ ಈ ಕೆಲಸವನ್ನು ಮಾಡಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಅವರು ಮಾತನಾಡಿ, ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾದರೆ ಮತ್ತೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಎ.ಬಿ. ಶೆಟ್ಟಿ ಡೆಂಟಲ್ ಕಾಲೇಜಿನ ಡೀನ್ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಬಜರಂಗದಳ ಕ್ಷೇತ್ರೀಯ ಸಂಯೋಜಕ್ ಸೂರ್ಯನಾರಾಯಣ, ವಿಹಿಂಪ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಪ್ರಮುಖರಾದ ಸುನಿಲ್ ಕೆ.ಆರ್., ಭುಜಂಗ ಕುಲಾಲ್, ರಘು ಸಕಲೇಶಪುರ, ರಂಗನಾಥ್ ಉಪಸ್ಥಿತರಿದ್ದರು.
ಬಜರಂಗದಳ ಪ್ರಾಂತ ಸಂಯೋಜಕ್ ಶರಣ್ ಪಂಪ್‌ವೆಲ್ ಸ್ವಾಗತಿಸಿದರು. ಮುರಳೀಕೃಷ್ಣ ಹಸಂತಡ್ಕ ಕಾರ್ಯಕ್ರಮ ನಿರೂಪಿಸಿದರು.