×
Ad

ಅ.29ರಂದು ದೀಪಾವಳಿ ಪ್ರಯುಕ್ತ ವಿವಿಧ ಸ್ಪರ್ಧೆಗಳು: ಐವನ್ ಡಿಸೋಜಾ

Update: 2016-10-23 23:32 IST

ಮಂಗಳೂರು,ಅ.23: ನಗರದ ಕದ್ರಿ ಮಂಜುನಾಥೇಶ್ವರ ದೇವಳದ ರಾಜಾಂಗಣದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಅ.29ರಂದು ಗೂಡು ದೀಪ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ ಹಾಗೂ ಅಕ್ಕಿ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ತಿಳಿಸಿದರು. 
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.29ರಂದು ಮಧ್ಯಾಹ್ನ 3ಕ್ಕೆ ದೀಪಾವಳಿ ಮತ್ತು ಭಾವೈಕ್ಯತೆ ಎಂಬ ವಿಷಯದಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸ್ಪರ್ಧಿಗಳಿಗೆ ತಲಾ 3 ನಿಮಿಷ ಕಾಲಾವಕಾಶ ನೀಡಲಾಗಿದೆ. ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ದೀಪಾವಳಿ ಹಬ್ಬಕ್ಕೆ ಪೂರಕವಾಗುವ ಚಿತ್ರಕಲಾ ಸ್ಪರ್ಧೆಯೂ ಸಹ ನಡೆಯಲಿದೆ ಎಂದರು. ಸಂಜೆ 4ಕ್ಕೆ ಗೂಡು ದೀಪ ಸ್ಪರ್ಧೆಗೆ ಚಾಲನೆ ನೀಡಲಾಗುವುದು. ಆಧುನಿಕ ಹಾಗೂ ಸಾಂಪ್ರದಾಯಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಗೂಡು ದೀಪ ಸ್ಪರ್ಧೆಯಲ್ಲಿ ವಿಜೇತರಿಗೆ 1 ಗ್ರಾಂ. ಬಂಗಾರ ಹಾಗೂ ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಚಿನ್ನ ನೀಡಲಾಗುವುದು ಎಂದವರು ಹೇಳಿದರು. ಸಂಜೆ 4:30ಕ್ಕೆ ತಲಾ 5 ಕೆ.ಜಿ.ಯಂತೆ 1,000 ಮಂದಿಗೆ ಅಕ್ಕಿ ವಿತರಿಸಲಾಗುವುದು. ಈ ಬಗ್ಗೆ ಈಗಾಗಲೇ ಅರ್ಹರಿಗೆ ಕೂಪನ್ ನೀಡಲಾಗಿದೆ. ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ವೈದ್ಯರು ನೀಡಿದ ಸಲಹೆ ಮೇರೆಗೆ ಅರ್ಹ ಫಲಾನುಭವಿಗಳಾದ 400 ಮಂದಿಗೆ ಕನ್ನಡಕ ವಿತರಿಸಲಾಗುವುದು ಎಂದರು. 
 ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಡಾ.ಆಲೋಶಿಯಸ್ ಪೌಲ್ ಡಿಸೋಜಾ, ಮೌಲಾನಾ ಜಾಫರ್ ಸಾಧಿಕ್ ಪೈಝಿ, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಟಿ.ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ. ಮನಪಾ ಮೇಯರ್ ಹರಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಮೃತ್ ಕದ್ರಿ, ರಫೀಕ್, ನಾಗೇಂದ್ರ ಕುಮಾರ್, ಎನ್.ಪಿ.ಮನುರಾಜ್, ಭಾಸ್ಕರ್ ರಾವ್, ವಾಲ್ಟರ್ ಲೋಬೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News