ಉಡುಪಿ: ಚಿಟ್ಟಾಣಿ ಯಕ್ಷಗಾನ ಸಪ್ತಾಹದ ಸಮಾರೋಪ
ಉಡುಪಿ, ಅ.23: ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಬಂಗಾರಮಕ್ಕಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಕಾರದೊಂದಿಗೆ ಉಡುಪಿ ಚಿಟ್ಟಾಣಿ ಅಭಿಮಾನಿ ಬಳಗವು ಆಯೋಜಿಸಲಾದ 9ನೆ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭವು ರವಿವಾರ ರಾಜಾಂಗಣದಲ್ಲಿ ಜರಗಿತು. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಮಂಟಪ ಪ್ರಭಾಕರ ಉಪಾಧ್ಯ ಅವರಿಗೆ ‘ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಪ್ರಶಸ್ತಿ’ ಮತ್ತು ಹಿರಿಯ ಅರ್ಥಧಾರಿ ಅಗಳಿ ಕೃಷ್ಣರಾವ್ ಅವರಿಗೆ ‘ಟಿ.ವಿ.ರಾವ್’ ಪ್ರಶಸ್ತಿಯನ್ನು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಗೋಪಿನಾಥ್ ಭಟ್, ಓರಿಯಂಟಲ್ ವಿಮಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಶರತ್ ಕುಮಾರ್, ಹೈಟೆಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಟಿ.ಎಸ್.ರಾವ್, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ಡೆ, ಮಠದ ದಿವಾನ ಕೆ.ರಘು ರಾಮ ಆಚಾರ್ಯ ಉಪಸ್ಥಿತರಿದ್ದರು.
ಚಿಟ್ಟಾಣಿ ಅಭಿಮಾನಿ ಬಳಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಿಕೃಷ್ಣ ರಾವ್ ವಂದಿಸಿದರು. ನಾರಾಯಣ ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನ ನಡೆಯಿತು.