ಪ್ರಾಂಶುಪಾಲರ ಮೇಲೆ ಹಲ್ಲೆಗೈದ ವಿದ್ಯಾರ್ಥಿಯ ಬಂಧನಕ್ಕೆ ಆಗ್ರಹ
ಬೆಳ್ತಂಗಡಿ, ಅ.24: ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಸಮಿತಿ ಅಧ್ಯಕ್ಷ ಅರುಣ್ ಸೆರಾವೋ ಎಚ್ಚರಿಸಿದ್ದಾರೆ.
ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದು ದಿನಗಳೇ ಕಳೆದಿದ್ದರೂ ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ಇದರಿಂದಾಗಿ ಶಿಕ್ಷಕರು ಭಯದಲ್ಲಿದ್ದಾರೆ. ಇಂತಹ ಘಟನೆಗಳು ಕರಾವಳಿಯಲ್ಲಿ ಪದೇ ಪದೇ ನಡೆಯುತ್ತಿದ್ದು ಶಿಕ್ಷಕ ಸಮುದಾಯ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸರಕಾರ ಕೂಡಲೆ ಗಮನ ಹರಿಸಬೇಕು. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಜೋಯಲ್ ಮೆಂಡೋನ್ಸ, ವಾಲ್ಟರ್ ಮೋನಿಸ್, ವಿಲಿಯಂ ಕೊಡ್ದೆರೊ, ಲಿಯೋ ರೋಡ್ರಿಗಸ್, ವಿಲಿಯಂ ಲೋಬೊ ಉಪಸ್ಥಿತರಿದ್ದರು.