2016ರ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ರೊನಾಲ್ಡೊ ನಾಮನಿರ್ದೇಶನ
ಪ್ಯಾರಿಸ್, ಅ.24: ರಿಯಲ್ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಗಾರೆತ್ ಬಾಲೆ ಹಾಗೂ ಮ್ಯಾಂಚೆಸ್ಟರ್ ಸಿಟಿಯ ಸೆರ್ಜಿಯೊ ಅಗುರೊ 2016ರ ಸಾಲಿನ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ ಎಂದು ಫ್ರೆಂಚ್ ಸ್ಪೋರ್ಟ್ಸ್ ಮ್ಯಾಗಜಿನ್ ಫ್ರಾನ್ಸ್ ಫುಟ್ಬಾಲ್ ಸೋಮವಾರ ಘೋಷಿಸಿದೆ.
ನಾಮನಿರ್ದೇಶನಗೊಂಡಿರುವ ಉಳಿದ ಆಟಗಾರರ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಫ್ರಾನ್ಸ್ ಫುಟ್ಬಾಲ್ ಮ್ಯಾಗಜಿನ್ ತಿಳಿಸಿದೆ.
ಫಿಫಾದೊಂದಿಗೆ ಸಂಬಂಧವನ್ನು ಕಡಿದುಕೊಂಡ ಹಿನ್ನೆಲೆಯಲ್ಲಿ 2016ರ ಸಾಲಿನ ಬ್ಯಾಲನ್ ಡಿ’ಒರ್ ಪ್ರಶಸ್ತಿಯ ಮಾರ್ಗಸೂಚಿಯನ್ನು ಸರಳಗೊಳಿಸಲಾಗಿದೆ.
2016ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕೇವಲ ಅಂತಾರಾಷ್ಟ್ರೀಯ ಪತ್ರಕರ್ತರು ಇರಲಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್‌ಗಳು ಹಾಗೂ ನಾಯಕರನ್ನು ಈ ಬಾರಿ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಕೈಬಿಡಲಾಗಿದೆ.
61ನೆ ಆವೃತ್ತಿಯ ಬ್ಯಾಲನ್ ಡಿ’ಒರ್ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ವನ್ನು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ.
ಕಳೆದ ಏಳು ವರ್ಷಗಳಲ್ಲಿ ಆರು ಬಾರಿ ಫಿಫಾ ಜೊತೆಗೂಡಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ನೀಡಲಾಗಿದೆ. ಬಾರ್ಸಿಲೋನದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ(2009, 2010, 2011, 2012, 2015) ಅತ್ಯಂತ ಹೆಚ್ಚು ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರೋನಾಲ್ಡೊ 2013 ಹಾಗೂ 2014ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.
2016ರ ಸಾಲಿನ ಪ್ರಶಸ್ತಿಯು ಲಾಲಿಗದ ಓರ್ವ ಆಟಗಾರನ ಪಾಲಾಗುವ ಸಾಧ್ಯತೆ ಅಧಿಕವಿದೆ.