ನಗರಸಭೆ ಜನರ ಧಾರ್ಮಿಕ ಭಾವನೆಯನ್ನು ಗೌರವಿಸುತ್ತದೆ: ಮುಹಮ್ಮದ್ ಅಲಿ

Update: 2016-10-24 11:35 GMT

ಪುತ್ತೂರು, ಅ.24: ವರ್ತಕರ ಕೇಳಿಕೆಯಂತೆ ನಗರಸಭೆಯು ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಗದ್ದೆಯಲ್ಲಿ ವಾರದ ಸಂತೆ ನಡೆಸಲು ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಧಾರ್ಮಿಕ ಭಾವನೆಗೆ ಆಘಾತ ನೀಡುತ್ತದೆ ಎಂದಾದರೆ ನಾವು ಬಲವಂತ ಮಾಡುವುದಿಲ್ಲ. ಸಂತೆ ವಿಚಾರದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಲಾಗುವುದು ಎಂದು ಪುತ್ತೂರು ನಗರಸಭೆಯ ಆಡಳಿತ ಪಕ್ಷದ ಹಿರಿಯ ಸದಸ್ಯ ಎಚ್.ಮುಹಮ್ಮದ್ ಅಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಎಪಿಎಂಸಿಯಲ್ಲಿ ಸಂತೆ ವಿಫಲವಾಗಿರುವುದು ಕಂಡು ಬಂದ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಸಂತೆ ನಡೆಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಿರುವುದು ನಿಜ. ಈ ಮನವಿ ಮಾಡಲು ಕೆಲವು ವರ್ತಕರು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರನ್ನು ಮೊದಲೇ ಭೇಟಿ ಮಾಡಿ ಮನವಿ ಮಾಡಿದ್ದರು. ವರ್ತಕರಲ್ಲಿ ಸುಧಾಕರ ಶೆಟ್ಟಿ ಅವರು ವೈಯಕ್ತಿಕವಾಗಿ ನನ್ನದೇನೂ ಅಭ್ಯಂತರವಿಲ್ಲ. ನಗರಸಭೆಯಿಂದ ಅಧಿಕೃತ ಮನವಿ ಬರಬೇಕು ಎಂದು ಹೇಳಿದ್ದರು ಎಂದು ವರ್ತಕರು ನಗರಸಭೆಗೆ ತಿಳಿಸಿದ್ದರು.

ಈ ವಿಷಯವನ್ನು ವರ್ತಕರಿಂದ ತಿಳಿದ ಮೇಲೆ ನಾವು ನಗರಸಭೆಯ ವತಿಯಿಂದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದ್ದೇವೆ. ಈಗ ಸುಧಾಕರ ಶೆಟ್ಟಿ ಅವರು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಸಂಘ ಸಂಸ್ಥೆಗಳು ಕೂಡ ವಿರೋಧಿಸಿವೆ. ಈ ವಿಚಾರದಲ್ಲಿ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮರಳುತ್ತಿದ್ದ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಸಿಕ್ಕಿದ್ದು, ಅವರಲ್ಲೂ ದೇವಳ ಗದ್ದೆಯಲ್ಲಿ ಸಂತೆಗೆ ಅವಕಾಶ ಕೇಳಿದ ಬಗ್ಗೆ ತಿಳಿಸಿದ್ದೇವೆ. ಅವರು ಕೂಡಾ ವಿರೋಧ ಏನೂ ಮಾತನಾಡಲಿಲ್ಲ. ಈಗ ಇದ್ದಕ್ಕಿದ್ದಂತೆ ರಾಜಕೀಯ ಕಾರಣಗಳಿಗೆ ವಿರೋಧ ಮಾಡಲಾಗುತ್ತಿದೆ. ಇಷ್ಟಿದ್ದರೂ ಜನರ ಧಾರ್ಮಿಕ ಭಾವನೆಗೆ ನಗರಸಭೆ ಗೌರವ ನೀಡುತ್ತದೆ ಎಂದು ತಿಳಿಸಿದರು.

ಮಸೀದಿ ಅಥವಾ ಚರ್ಚ್ ಆವರಣದಲ್ಲಿ ಸಂತೆ ನಡೆಸಲಿ, ದೇವಳದ ಗದ್ದೆ ಯಾಕೆ ಎಂದು ನಗರಸಭೆ ಸದಸ್ಯ ರಾಜೇಶ್ ಬನ್ನೂರು ಪ್ರಶ್ನಿಸಿರುವುದನ್ನು ಉಲ್ಲೇಖಿಸಿದ ಮುಹಮ್ಮದ್ ಅಲಿ, ಪುತ್ತೂರು ನಗರದ ಮಧ್ಯದಲ್ಲಿ ಸಂತೆ ನಡೆಸುವಷ್ಟು ಅವಕಾಶ ಯಾವುದೇ ಮಸೀದಿ ಅಥವಾ ಚರ್ಚ್ ವಠಾರದಲ್ಲಿ ಇಲ್ಲ. ಅಂತಹ ಪ್ರದೇಶವನ್ನು ರಾಜೇಶ್ ಬನ್ನೂರು ಅವರು ತೋರಿಸಿದಲ್ಲಿ ಖಂಡಿತಾ ನಾವು ಮನವಿ ಮಾಡುತ್ತೇವೆ. ನಮ್ಮ ಮುಖ್ಯ ಉದ್ದೇಶ ಇಲ್ಲಿನ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮಾತ್ರ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News