ಇಂತಹ ದೌರ್ಜನ್ಯವೆಸಗಿದ ಮಕ್ಕಳು ನಮಗೆ ಬೇಡ: ಅಬ್ದುರ್ರಹ್ಮಾನ್

Update: 2016-10-24 13:44 GMT

ಮಂಗಳೂರು, ಅ.24: ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿಯೋರ್ವ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿಲಾಗ್ರಿಸ್ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಮಿತಿ ಮತ್ತು ಉಪನ್ಯಾಸಕರ ತುರ್ತು ಸಭೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಿಕ್ಷಕ ರಕ್ಷಕ ಸಮಿತಿಯ ಸದಸ್ಯ ಅಬ್ದುರ್ರಹ್ಮಾನ್, ಇಂತಹ ದೌರ್ಜನ್ಯವನ್ನು ಮಾಡಿದ ಮಕ್ಕಳು ನಮಗೆ ಬೇಡ. ಇಂತಹ ಮಕ್ಕಳು ಸಮಾಜಕ್ಕೆ ಹಾಗೂ ಧರ್ಮಕ್ಕೆ ಕಪ್ಪುಚುಕ್ಕೆ. ಒಂದು ದಿನ ಎಲ್ಲಾ ಪೋಷಕರು ಸೇರಿ ಪ್ರತಿಭಟನೆ ಮಾಡುತ್ತೇವೆ. ಆ ವಿದ್ಯಾರ್ಥಿಗಳಿಗೆ ಸರಿಯಾದ ಉತ್ತರ ನೀಡಬೇಕು ಎಂದು ಹೇಳಿದರು.

ವಕೀಲೆ ಎಲಿಝಬೆತ್ ನೀಲಿಯಾ ಮಾತನಾಡಿ, ಶಿಸ್ತು ಪಾಲನಾ ಸಮಿತಿಯ ರಚನೆಯಾಗಬೇಕು. ನಿಯಮಾವಳಿಗಳನ್ನು ಮಾಡಬೇಕು. ಈ ನಿಯಾವಳಿಗಳನ್ನು ಮುರಿಯುವವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಹೇಳಿದರು.

ಆಡಳಿತ ಮಂಡಳಿಯ ಸದಸ್ಯ ಐವನ್ ಡಿಸೋಜ ಮಾತನಾಡಿ, ಮಕ್ಕಳಿಗೆ ಶಾಲೆಯಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ ಅವರಿಗೆ ಕಾನೂನಿನ ರಕ್ಷಣೆಯಿದೆ. ಈ ಕಾನೂನು ಕೇವಲ ಮಕ್ಕಳಿಗೆ ಮಾತ್ರವೇ ಅಥವಾ ಶಿಕ್ಷಕರಿಗೂ ಇದೆಯೇ? ಶಿಕ್ಷಕರಿಗೂ ರಕ್ಷಣೆಯಾಗಬೇಕು ಎಂದು ಹೇಳಿದರು.

ಆಲ್ವಿನ್ ಡಿಸೋಜ ಮಾತನಾಡಿ, ಪ್ರಾಂಶುಪಾಲರನ್ನು ಹೊಡೆದದ್ದು ಬಹಳ ಗಂಭೀರವಾದ ವಿಷಯ. ಇದಕ್ಕೆ ಉತ್ತರ ಕೊಡಬೇಕಾದದ್ದು ನೀವು ಹಾಗೂ ನಾವು ಆಗಬೇಕು ಎಂದರು. ರೇಮಂಡ್ ಡಿಕುನ್ಹಾ ಮಾತನಾಡಿ, ವಿದ್ಯಾರ್ಥಿ ಹೊಡೆಯುವ ಮಟ್ಟಕ್ಕೆ ಬೆಳೆಯುವುದಾದರೆ ಅವನ ಹಿಂದೆ ಉಳಿದ ಬೇರೆಯವರ ಬೆಂಬಲ ಇರಬೇಕು. ಇದಕ್ಕೆ ತಕ್ಕ ಶಿಕ್ಷೆ ಕೊಡಿ, ಅದನ್ನು ನಾವು ಬೆಂಬಲಿಸುತ್ತೇವೆ ಎಂದರು.

ಸಭೆಯಲ್ಲಿ ಹಾಜರಿದ್ದ ಎಲ್ಲರೂ ಸೇರಿ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿದ ಘಟನೆಯನ್ನು ತೀವ್ರವಾಗಿ ಖಂಡಿಸುವ ನಿರ್ಧಾರವನ್ನು ತೆಗೆದುಕೊಂಡರು. ಇಂತಹ ಘಟನೆ ಇನ್ನು ಮುಂದೆ ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತೀರ್ಮಾನಿಸಲಾಯಿತು.

ಆಡಳಿತ ಮಂಡಳಿಯ ಸದಸ್ಯ ರೆ.ಫಾ. ಜೆರಾಲ್ಡ್ ಡಿಸೋಜ, ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ರೆ.ಫಾ. ವಲೇರಿಯನ್ ಡಿಸೋಜ, ಐವನ್ ಡಿಸೋಜ, ಸವಿಲ್ ಮಸ್ಕರೇನ್ಹಸ್, ಆಲ್ವಿನ್ ರೊಸಾರಿಯೊ, ಪ್ರೊ. ಮರಿಯಾ ಡಿಕೋಸ್ತಾ, ಪ್ರೊ.ಜೆರಾರ್ಡ್ ಡಿಸೋಜ, ಶಿಕ್ಷಕ ರಕ್ಷಕ ಸಮಿತಿಯ ಸದಸ್ಯರಾದ ರೊನಾಲ್ಡ್ ಪಿಂಟೊ, ಜೋಯ್ಸ್ ದೇವಾಡಿಗ, ಆಲ್ವಿನ್ ಡಿಸೋಜಾ, ರೇಮಂಡ್ ಡಿಕುನ್ಹಾ, ಇಬ್ರಾಹೀಂ, ಆಲಿಸ್ ಡಿಸೋಜ, ಜೋಯ್ಸಾ ಕ್ರಾಸ್ತಾ, ಅಬ್ದುಲ್ ಹಮೀದ್, ವೀಣಾ ಕಾಮತ್, ಪ್ರತಿಭಾ ದೇವಾಡಿಗ, ಆಶಾ, ಎಸ್.ಎಂ. ಹಬೀಬುಲ್ಲಾ ಕೋಯಾ, ಹಲೀಮಾ ಬಾನು ಹಾಗೂ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News