ಮುಂದಿನ ವರ್ಷದಿಂದ ಹಜ್ ಅರ್ಜಿ ಸಲ್ಲಿಸಲು ಹೊಸ ವಿಧಾನ ?

Update: 2016-10-24 14:06 GMT


 ಮುಂಬೈ, ಅ.24: ಮುಂಬರುವ ಹಜ್ ಯಾತ್ರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಜನತೆ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಅವಕಾಶ ಪಡೆಯಲು ಪ್ರೋತ್ಸಾಹ ನೀಡಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

ಭಾರತೀಯ ಹಾಜ್ ಸಮಿತಿ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಹಾಜ್ ಸಮಿತಿ ಆಶ್ರಯದಲ್ಲಿ ದಕ್ಷಿಣ ಮುಂಬೈಯ ಹಾಜ್‌ಭವನದಲ್ಲಿ ಇಂದು ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಹಜ್ ಯಾತ್ರೆಗೆ ದೇಶದಾದ್ಯಂತ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ.11ರಷ್ಟು ಅಂದರೆ, 45,843 ಮಂದಿ ಆನ್‌ಲೈನ್ ಮೂಲಕ ಅರ್ಜಿ ಹಾಕಿದ್ದರು. ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 10,960 ಮಂದಿ ನ್‌ಲೈನ್ ಮೂಲಕ ಅರ್ಜಿ ಹಾಕಿದ್ದರು. ಕೇರಳದಿಂದ 9,257, ಉತ್ತರಪ್ರದೇಶದಿಂದ 5,407, ತೆಲಂಗಾಣದಿಂದ 2,983, ಜಮ್ಮು ಕಾಶ್ಮೀರದಿಂದ 2,426, ಗುಜರಾತ್‌ನಿಂದ 2,425 ಅರ್ಜಿಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗಿದೆ ಎಂದು ವಿವರಿಸಿದರು.

ಈ ಬಾರಿ ದೇಶದಾದ್ಯಂತ ಒಟ್ಟು 99,093 ಮಂದಿ ಭಾರತೀಯ ಹಾಜ್ ಸಮಿತಿ ಮೂಲಕ ಹಜ್ ಯಾತ್ರೆಗೆ ತೆರಳಿದ್ದಾರೆ. ಅಲ್ಲದೆ ಖಾಸಗಿ ಪ್ರವಾಸಿ ಸಂಸ್ಥೆಗಳ ಮೂಲಕ ಸುಮಾರು 36 ಸಾವಿರ ಯಾತ್ರಾರ್ಥಿಗಳು ತೆರಳಿದ್ದಾರೆ. ಕಳೆದ ಹಜ್ ಯಾತ್ರೆ ಸಂದರ್ಭ ಯಾತ್ರಾರ್ಥಿಗಳಿಗೆ ಸೌಲಭ್ಯದ ವ್ಯವಸ್ಥೆ ಮಾಡಲು ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯವು ಮೆಕ್ಕಾ ಮತ್ತು ಮದೀನಾಕ್ಕೆ ಅಧಿಕಾರಿಗಳ ತಂಡವನ್ನು ಕಳಿಸಿತ್ತು . ಹಜ್ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಲು ಮತ್ತು ಯಾತ್ರೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಅತ್ಯುತ್ತಮ ಸೌಲಭ್ಯ ಒದಗಿಸಲು ಕೇಂದ್ರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸಲಹೆ ನೀಡಲು ರಾಜ್ಯಗಳು ಮತ್ತು ಸಂಸದರಿಗೆ ಪತ್ರ ಬರೆಯಲಾಗಿದೆ ಎಂದರು.


ಹಜ್ ಯಾತ್ರೆ ಬಗ್ಗೆ ಮಾಹಿತಿ ನೀಡುವ ಸುಮಾರು ಹದಿನೈದು ನಿಮಿಷಗಳ ಸಿನೆಮಾವೊಂದನ್ನು ಇಲಾಖೆಯ ವತಿಯಿಂದ ಸಿದ್ಧಪಡಿಸಲಾಗಿದ್ದು ಇದನ್ನು ಹಜ್ ಯಾತ್ರಾರ್ಥಿಗಳ ತರಬೇತಿ ಶಿಬಿರದಲ್ಲಿ ಪ್ರದರ್ಶಿಸಲಾಗುವುದು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News