×
Ad

ಕೊಣಾಜೆ ಯುವಕನ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಮುಂದುವರಿದ ಶೋಧ

Update: 2016-10-24 20:03 IST

ಕೊಣಾಜೆ, ಅ.24: ಅಸೈಗೋಳಿ ಸಮೀಪದ ಕೊಣಾಜೆ ಬಳಿ ವಾಕಿಂಗ್ ಹೋಗುತ್ತಿದ್ದ ಪಜೀರಿನ ಕಾರ್ತಿಕ್ ರಾಜ್‌ನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಆರೋಪಿಗಳ ಪತ್ತೆಗಾಗಿ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಪಜೀರು ಗ್ರಾಮದ ಸುದರ್ಶನನಗರ ನಿವಾಸಿ ಉಮೇಶ್ ಎಂಬವರ ಪುತ್ರ ಕಾರ್ತಿಕ್ ರಾಜ್‌ರ ಮೇಲೆ ಶನಿವಾರ ಮುಂಜಾನೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಇದರಿಂದ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಕಾರ್ತಿಕ್ ರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಮೃತಪಟ್ಟಿದ್ದರು. ಆರಂಭದಲ್ಲಿ ಇದೊಂದು ಆಕ್ಸಿಡೆಂಟ್ ಕೇಸ್ ಎಂದು ಶಂಕಿಸಲಾಗಿದ್ದರೂ ಬಳಿಕ ಇದೊಂದು ವ್ಯವಸ್ಥಿತವಾದ ಕೊಲೆ ಎಂದು ತನಿಖೆಯಿಂದ ತಿಳಿದು ಬಂದಿತ್ತು.

ಚುರುಕುಗೊಂಡ ತನಿಖೆ

ಈಗಾಗಲೇ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ತಂಡವನ್ನು ರಚನೆ ಮಾಡಿದ್ದು ತನಿಖೆಯನ್ನು ಚುರುಕುಗೊಳಿಸಿದ್ದರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ರಾಜ್‌ನ ಗೆಳೆಯರು, ಸಂಬಂಧಿಕರು ಹಾಗೂ ಇತರ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಜನಸ್ತೋಮ

ರವಿವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ದೇರಳಕಟ್ಟೆಯ ಆಸ್ಪತ್ರೆಯಿಂದ ಪಜೀರಿನ ಮನೆಗೆ ಕಾರ್ತಿಕ್‌ನ ಮೃತದೇಹವನ್ನು ತರಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಶಾಂತಿಯ ವಾತಾವರಣ ನಿರ್ಮಾಣವಾಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಬಳಿಕ ಪಜೀರಿನ ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News