×
Ad

ಪ್ರಾಂಶುಪಾಲರ ಮೇಲೆ ಹಲ್ಲೆಗೈದ ವಿದ್ಯಾರ್ಥಿಯ ಬಂಧನ

Update: 2016-10-24 20:43 IST

ಮಂಗಳೂರು, ಅ. 24: ನಗರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮೈಕಲ್ ಸಾಂತುಮೇಯರ್‌ರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಬಂದರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ಮಿಲಾಗ್ರಿಸ್ ಕಾಲೇಜಿನ ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ, ಪಾಂಡೇಶ್ವರದ ನಿವಾಸಿ ಮುಹಮ್ಮದ್ ಶಾಹ್‌ನವಾಝ್ ಎಂದು ಗುರುತಿಸಲಾಗಿದೆ.

ಇಂದು ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಬಂದರು ಇನ್ಸ್‌ಪೆಕ್ಟರ್ ಶಾಂತಾರಾಂ ನೇತೃತ್ವದಲ್ಲಿ ಪೊಲೀಸರು ಶಾಹ್‌ನವಾಝ್‌ನನ್ನು ಪಂಪ್‌ವೆಲ್‌ನಲ್ಲಿ ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಈತ, ಕೇರಳದ ಕಡೆಗೆ ಹೋಗಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಹ್‌ನವಾಝ್ ಅಕ್ಟೋಬರ್ 20ರಂದು ಕಾಲೇಜಿನ ಹಾಜರಾತಿ ವಿಷಯಕ್ಕೆ ಸಂಬಂಧಿಸಿ ಕರ್ತವ್ಯದಲ್ಲಿದ್ದ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾಗಿದ್ದ ಪ್ರಾಂಶುಪಾಲರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಗೆ ಸಂಬಂಧಿಸಿ ಕೆಲವು ಸಂಘಟನೆಗಳಿಂದ ಖಂಡನೆಗಳು ವ್ಯಕ್ತವಾಗಿದ್ದವು. ಮಾತ್ರವಲ್ಲದೆ, ವಿದ್ಯಾರ್ಥಿಯ ಬಂಧನಕ್ಕೆ ಒತ್ತಾಯ ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News