×
Ad

ಎಲ್ಲೈಸಿಯ ಮಧ್ಯವರ್ತಿಗಳ 'ಜೀವನ ಮಧುರ' ಮಾಡಿದ ಪಾಲಿಸಿದಾರರ ಕೋಟ್ಯಂತರ ರೂ. ಹಣ !

Update: 2016-10-24 21:01 IST

ಉಡುಪಿ, ಅ.24: ಭಾರತೀಯ ಜೀವವಿಮಾ ನಿಗದ ಉಡುಪಿ ವಿಭಾಗಕ್ಕೆ ಸೇರಿದ 57,000ಕ್ಕೂ ಅಧಿಕ ಸೂಕ್ಷ್ಮವಿಮಾ ಯೋಜನೆ (ಮೈಕ್ರೋ ಇನ್ಸೂರೆನ್ಸ್ ಸ್ಕೀಮ್) ಪಾಲಿಸಿದಾರರು ಕಟ್ಟಿದ ಕೋಟ್ಯಾಂತರ ರೂ.ಗಳನ್ನು ಎಲ್ಲೈಸಿಯೇ ನೇಮಿಸಿದ ಮಧ್ಯವರ್ತಿಗಳು (ಪ್ರತಿನಿಧಿ-ಏಜೆಂಟ್ಸ್) ಕಬಳಿಸಿದ ಘಟನೆ ಬೆಳಕಿಗೆ ಬಂದಿದೆ ಎಂದು ಪ್ರಕರಣದ ಕೂಲಂಕಷ ತನಿಖೆ ನಡೆಸಿ ಹಗರಣವನ್ನು ಬೆಳಕಿಗೆ ತಂದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಆಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಭಾಗವೊಂದರಲ್ಲೇ 57,800ರಷ್ಟು ಪಾಲಿಸಿಗಳು ರದ್ದಾಗಿರುವ ಈ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ ತೋರಿಸಿದ ಎಲ್ಲೈಸಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಲ್ಲೈಸಿ ಉಡುಪಿ ವಿಭಾಗ ನೇಮಿಸಿದ ಏಜೆಂಟ್‌ಗಳು ಸುಮಾರು 200ಕ್ಕೂ ಅದಿಕ ಗ್ರಾಮಗಳಲ್ಲಿ ಎಲ್ಲೈಸಿ ಪರವಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಇತರ ಸಬ್‌ಏಜೆಂಟ್‌ರು ಇದೀಗ ಪಾಲಿಸಿದಾರರ ಆಕ್ರೋಶಕ್ಕೆ ಗುರಿಯಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ ಎಂದವರು ಹೇಳಿದರು.

ಎಲ್ಲೈಸಿಯ ಯೋಜನೆ ಎಂಬ ವಿಶ್ವಾಸ ಹಾಗೂ ಆಶಾವಾದದಿಂದ ಆಯಾ ಗ್ರಾಮಗಳಲ್ಲಿ ತಾವು ಮಾಡಿದ ನೂರಾರು ಮಂದಿ ಪಾಲಿಸಿದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂ. ಪ್ರೀಮಿಯಂ ಹಣವನ್ನು ಎಲ್ಲೈಸಿಯೇ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಅಧಿಕೃತ ರಸೀದಿಯನ್ನು ಪಡೆದಿರುವ ಈ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರ ಉತ್ಸಾಹಿ ಬಡ ಮಹಿಳೆಯರು ಇದೀಗ ಸರ್ವಸ್ವವನ್ನೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದವರು ದೂರಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ ಆಗಮಿಸಿದ್ದ ಒಂಭತ್ತು ಮಂದಿ ಸಬ್ ಎಜೆಂಟ್‌ಗಳು ಇಂದು ಡಾ.ಶಾನುಭಾಗ್‌ರೊಂದಿಗೆ ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿ ತಮ್ಮ ಗೋಳಿನ ಕತೆಯನ್ನು, ಕುಟುಂಬದೊಳಗೆ ನಡೆದಿರುವ ಬೇಗುದಿಯನ್ನು, ಊರಿನಲ್ಲಿ ಬಡ ಪಾಲಿಸಿದಾರರನ್ನು ಎದುರಿಸಲಾಗದೇ ನಡೆಸಬೇಕಾದ ಅಜ್ಞಾನ ಜೀವನದ ಸಂಕಷ್ಟವನ್ನು ಕಣ್ಣೀರಿನೊಂದಿಗೆ ತೆರೆದಿಟ್ಟರು.

ಪ್ರಕರಣದ ಹಿನ್ನೆಲೆ

ದೇಶದ ವಿಮಾ ನಿಯಂತ್ರಮ ಮತ್ತು ಅಭಿವೃದ್ಧಿ ನಿರ್ದೇಶನಾಲಯ (ಐಆರ್‌ಡಿಎ) ರಚಿಸಿದ ಮಾರ್ಗದರ್ಶಿ ಸೂತ್ರದಂತೆ ಭಾರತೀಯ ಜೀವವಿಮಾ ನಿಗಮ ಮೈಕ್ರೋ ಇನ್ಸೂರೆನ್ಸ್ ಯೋಜನೆಯನ್ನು 2008ರಲ್ಲಿ ಜಾರಿಗೊಳಿಸಿತ್ತು. ದೇಶದ ಹಳ್ಳಿಗಳಲ್ಲಿರುವ ಬಡ ಜನರಿಗೆ ನೆರವಾಗುವ ಉದ್ದೇಶದೊಂದಿಗೆ ಜಾರಿಗೆ ಬಂದ ಈ ಯೋಜನೆಯಂತೆ 5ರಿಂದ 15 ವರ್ಷಗಳ ಅವಧಿಗೆ 5,000ರೂ.ಗಳಿಂದ 30,000ರೂ.ಗಳ  ಈ ಪಾಲಿಸಿಗೆ ಅತೀ ಕಡಿಮೆ ವಾರ್ಷಿಕ ಪ್ರೀಮಿಯಂನ್ನು ನಿಗದಿ ಪಡಿಸಲಾಗಿತ್ತು. ಬಡ ಜನರು ಕನಿಷ್ಠ 60ರೂ.ಗಳಷ್ಟು ಕಡಿಮೆ ಪ್ರೀಮಿಯಂಗೆ ಪಾಲಿಸಿಯನ್ನು ಖರೀದಿಸಬಹುದಿತ್ತು. ವಾರ್ಷಿಕವಾಗಿ 600ರೂ.ವನ್ನು ಒಂದೇ ಕಂತಿನಲ್ಲಿ ನೀಡಲಾಗದವರು ತಿಂಗಳಿಗೆ 50ರೂ.ಗಳ ಕಂತನ್ನು ಕಟ್ಟಬಹುದಿತ್ತು.

ಎಲ್ಲೈಸಿಯೇ ಐಆರ್‌ಡಿಎ ನೀಡಿದ ಮಾರ್ಗದರ್ಶಿ ಸೂತ್ರದಂತೆ ನೇಮಿಸಿದ ಸರಕಾರೇತರ ಸಂಸ್ಥೆ (ಎನ್‌ಜಿಒ)ಯ ವಿಮಾ ಪ್ರತಿನಿಧಿಗಳು ಆಯಾ ಗ್ರಾಮ ಗಳಲ್ಲಿ ಸಬ್‌ಏಜೆಂಟ್‌ಗಳನ್ನು ನೇಮಿಸಿ ಅವರ ಮೂಲಕ ಪಾಲಿಸಿದಾರರನ್ನು ಹುಡುಕಿ ಸೇರಿಸಿಕೊಳ್ಳುತಿದ್ದರು. ಊರಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಣ್ಣಪುಟ್ಟ ಕೆಲಸದಲ್ಲಿದ್ದ, ಮೊದಲೇ ಎಲ್ಲೈಸಿ ಏಜೆಂಟ್ ಆಗಿದ್ದ ಪುರುಷ ಮತ್ತು ಮಹಿಳೆಯರು ಸಬ್‌ಎಜೆಂಟ್ ಗಳಾಗಿ ನೂರಾರು ಪಾಲಿಸಿದಾರರನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇವರು ಆಯಾ ಗ್ರಾಮಗಳ ಪಾಲಿಸಿದಾರರಿಂದ ನಿಯಮಿತವಾಗಿ ಪ್ರೀಮಿಯಂ ಹಣವನ್ನು ಸ್ವೀಕರಿಸಿ ಅದನ್ನು ಆಯಾ ಗ್ರಾಮದ ವಿಮಾ ಪ್ರತಿನಿಧಿಗಳಿಗೆ ಹಸ್ತಾಂತರಿಸಬೇಕಾಗಿತ್ತು. 2008ರಿಂದ ಪ್ರಾರಂಭಗೊಂಡ ಈ ಯೋಜನೆಯಲ್ಲಿ ಉಡುಪಿ ವಿಭಾಗಕ್ಕೆ ಸೇರಿದ ಕಡೂರು, ಚಿಕ್ಕಮಗಳೂರು, ಅರಸಿಕೆರೆ, ತರೀಕೆರೆ, ಮೂಡಿಗೆರೆ, ಎನ್‌ಆರ್‌ಪುರ ಮುಂತಾದ ತಾಲೂಕುಗಳ 200ಕ್ಕೂ ಹೆಚ್ಚು ಗ್ರಾಮಗಳಿಂದ 58,000ಕ್ಕೂ ಅಧಿಕ ಬಡಜನರನ್ನು ವಿಮಾ ಯೋಜನೆಗೆ ಸೇರಿಸಿ ಪಾಲಿಸಿ ಖರೀದಿಸಿದರು.

ಪ್ರತಿತಿಂಗಳು ನಿಯಮಿತವಾಗಿ ಪ್ರೀಮಿಯಂ ಹಣವನ್ನು ಸಂಗ್ರಹಿಸುತಿದ್ದ ಇವರು ಎಲ್ಲೈಸಿಯಿಂದ ನೇಮಿತವಾದ ಸಮನ್ವಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶುಭೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಮುಕ್ಕಣ್ಣೇಶ್ವರಿ ಯುವತಿ ಮಂಡಲಗಳಿಗೆ ಪಾವತಿಸುತಿದ್ದರು. ಆದರೆ 2013ರ ಜುಲೈ ತಿಂಗಳಲ್ಲಿ ಪಾಲಿಸಿದಾರರೊಬ್ಬರು ನಿಧನರಾದಾಗ ಸಲ್ಲಿಸಿದ್ದ ಕ್ಲೈಮ್ ಪಾಲಿಸಿ ಜೀವಂತವಾಗಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕೃತವಾದಾಗ, ತಾವು ನಿಗದಿತವಾಗಿ ಕಟ್ಟಿದ್ದ ಪ್ರೀಮಿಯಂ ಹಣ ಎಲ್ಲೈಸಿಗೆ ಪಾವತಿಯಾಗಿಲ್ಲ ಎಂಬ ಮಾಹಿತಿ ಗೊತ್ತಾಯಿತು. ಬಳಿಕ ವಿಚಾರಿಸಿದಾಗ ಹೆಚ್ಚಿನವರ ಕೇವಲ ಒಂದು ಪ್ರೀಮಿಯಂ ಕಂತನ್ನು ಮಾತ್ರ ಕಟ್ಟಿರುವುದು ಗೊತ್ತಾಯಿತು. ಪಾಲಿಸಿದಾರರು ಕಟ್ಟಿದ ಹಣವನ್ನು ಎಲ್ಲೈಸಿ ನೇಮಿಸಿದ ವಿಮಾ ಪ್ರತಿನಿಧಿ ಸಂಸ್ಥೆ ಸಮನ್ವಯ ಗ್ರಾಮೀಣ ಸಂಸ್ಥೆ ಲಪಟಾಯಿಸಿರುವುದು ಬೆಳಕಿಗೆ ಬಂತು ಎಂದು ಡಾ.ಶಾನುಭಾಗ್ ನುಡಿದರು.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿದಾಗ ಎಲ್ಲೈಸಿ ಕಚೇರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ 50,000ಕ್ಕೂ ಅಧಿಕ ಪಾಲಿಸಿಗಳ ಹಣ ಕಟ್ಟದಿರುವುದು ಗೊತ್ತಾಯಿತು. ಆದರೆ ಪಾಲಿಸಿದಾರರು ಬಡವರಾಗಿದ್ದು, ಅವಿದ್ಯಾವಂತರಾಗಿದ್ದ ರಿಂದ ಹಣ ಯಾರು ಲಪಟಾಯಿಸಿದ್ದಾರೆಂದು ಅವರಿಗೆ ತಿಳಿಯಲಿಲ್ಲ ಎಂದರು. ಅವರೆಲ್ಲರೂ ತಮ್ಮಿಂದ ಹಣವನ್ನು ಪಡೆಯುತಿದ್ದ ಸಬ್ ಏಜೆಂಟ್‌ರನ್ನೇ ಗುರಿಯಾಗಿಸಿಕೊಂಡು ಅವರು ಮನೆಗಳಿಗೆ ನುಗ್ಗಿ ಗಲಾಟೆ ಎಬ್ಬಿಸಿದರು. ಅನೇಕ ಅಂಗನವಾಡಿ ಕಾರ್ಯಕತೆಯರು ಹಲ್ಲೆಗೂ ತುತ್ತಾದರು.

ಇಷ್ಟಾದರೂ ಎಲ್ಲೈಸಿ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಪೊಲೀಸರಿಗೆ ದೂರು ನೀಡಲಿಲ್ಲ. ಇದಕ್ಕಾಗಿ ಅವರು ಒಂದು ವರ್ಷದವರೆಗೆ ಕಾದು 2014ರ ಜುಲೈ ಬಳಿಕ ಕಡೂರು ಹಾಗೂ ತರಿಕೆರೆ ಠಾಣೆಗಳಲ್ಲಿ ದೂರು ದಾಖಲಿಸಿದರು. ಆದರೆ ಈವರೆಗೂ ತನಿಖೆ ಪೂರ್ಣಗೊಳ್ಳದೇ ಗ್ರಾಮದಲ್ಲಿರುವ ಈ ಸಬ್ ಏಜೆಂಟ್‌ರು ಪಾಲಿಸಿದಾರರ ಆಕ್ರೋಶಕ್ಕೆ ಗುರಿಯಾಗಿ ತಲೆಮರೆಸಿಕೊಂಡು, ಸುಳ್ಳು ಹೇಳಿಕೊಂಡು ಬದುಕುವ ಸ್ಥಿತಿ ಮುಂದುವರಿದಿದೆ ಎಂದ ಕಡೂರಿನಿಂದ ಮಹಿಳೆಯರು ದೂರಿದರು.

ಪ್ರಕರಣದ ಕುರಿತು ನಮ್ಮ ಸಂಸ್ಥೆ ತನಿಖೆ ಪ್ರಾರಂಬಿಸಿದ ಬಳಿಕ ಕಳೆದ ಜು.14ರಂದು ಎಲ್ಲೈಸಿ ಚಿಕ್ಕಮಗಳೂರಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಶುಭೋದಯ ಗ್ರಾಮೀಣ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದೆ ಎಂದರು. ಕಡೂರು ತಾಲೂಕೊಂದರಲ್ಲೇ 75ರಿಂದ 80 ಲಕ್ಷ ರೂ. ಹಣವನ್ನು ಲಪಟಾಯಿಸಲಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷರಿಗೆ ಪತ್ರ 

ಪ್ರತಿಷ್ಠಾನ ಈಗ ಐಆರ್‌ಡಿಎ ಅಧ್ಯಕ್ಷರಿಗೆ ಪತ್ರ ಬರೆದು ಪ್ರಕರಣದಲ್ಲಿ ಕಷ್ಟ-ನಷ್ಟಕ್ಕೊಳಗಾರಿರುವ ಬಡ ಅಂಗನವಾಡಿ, ಆಶಾ ಕಾರ್ಯಕತೆಯರು, ಹಾಗೂ ಇತರರಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದೆ. ಪ್ರೀಮಿಯಂ ಹಣಕ್ಕೆ ರಸೀದಿ ಹೊಂದಿರುವ ಪಾಲಿಸಿದಾರರನ್ನು ರಕ್ಷಿಸಬೇಕು. ಪಾಲಿಸಿದಾರರನ್ನೂ, ಎಲ್ಲೈಸಿಯನ್ನು ವಂಚಿಸಿದ ಎನ್‌ಜಿಒಗಳ ಮೇಲೆ ಹಾಗೂ ಕರ್ತವ್ಯ ನಿರ್ಲಕ್ಷ ತೋರಿದ ಜೀವವಿಮಾ ನಿಗಮದ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ ಎಂದರು.

2-5ರೂ. ಕಮಿಷನ್ ಆಸೆಗೆ ಲಕ್ಷಾಂತರ ಕಳೆದುಕೊಂಡೆವು!

'ಸಿಗುವ 2ರಿಂದ 5ರೂ. ಕಮಿಷನ್‌ಗಾಗಿ ನಾವುಗಳು ಈಗ ಪಾಲಿಸಿದಾರರ ಲಕ್ಷಾಂತರ ರೂ.ಗಳನ್ನು ಕೈಯಿಂದ ತುಂಬಿ ಬೀದಿಗೆ ಬಿದ್ದಿದ್ದೇವೆ. ಆದರೂ ಎಲ್ಲೈಸಿ ಪಾಲಿಸಿದಾರರಿಗೆ ಹಣ ನೀಡದೇ ಸತಾಯಿಸುತ್ತಿದೆ. ಆತ್ಮಹತ್ಯೆಯೊಂದೇ ನಮಗಿರುವ ದಾರಿ' ತಮ್ಮ ಗೋಳು ತೊಡಿಕೊಂಡವರು ಕಡೂರಿನ ಲಕ್ಷ್ಮಿ.

ಊರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುವ ಲಕ್ಷ್ಮೀ ತನ್ನದೇ ರೀತಿಯಲ್ಲಿ ವಂಚನೆಗೊಳದಾದ 8 ಮಂದಿಯೊಂದಿಗೆ ಈ ಉಡುಪಿಗೆ ಪ್ರತಿಷ್ಠಾನದ ಕಚೇರಿಗೆ ಆಗಮಿಸಿ ಪತ್ರಕರ್ತರ ಮುಂದೆ ನೋವು ತೋಡಿಕೊಂಡರು. ಅಲ್ಲಿಂದ ಬಂದ ರಘು ಕಡೂರು ಮೂರು ಲಕ್ಷ ರೂ, ಸುಮಿತ್ರ ಒಟ್ಟು 7.0 ಲಕ್ಷ ರೂ., ಗೀತಾ 1.5ಲಕ್ಷ, ಅನ್ನಪೂರ್ಣ 3ಲಕ,, ಶ್ರೀನಿವಾಸಮೂರ್ತಿ 3 ಲಕ್ಷ ರೂ., ನಾಗರಾಜ 3.47 ಲಕ್ಷ ರೂ., ಆಶಾ ಕಾರ್ಯಕರ್ತೆ ಶಕುಂತಲಾ 1.5ಲಕ್ಷ ರೂ.ವನ್ನು ಕೈಯಿಂದ ಕಟ್ಟಿ ಕಂಗಾಲಾದವರು. ನಾಳಿನ ಬಗ್ಗೆ ಚಿಂತಿತರಾದವರು.

ಪೊಲೀಸ್ ತನಿಖೆ ನಡೆಯುತ್ತಿದೆ: ಎಸ್‌ಡಿಎಂ

ಹಗರಣದ ಕುರಿತು ಎಲ್‌ಐಸಿ ಉಡುಪಿ ವಿಭಾಗೀಯ ಕಚೇರಿ ಹಿರಿಯ ವಿಭಾಗಾಧಿಕಾರಿ ಪಿ.ವಿಶ್ವೇಶ್ವರ ರಾವ್ ಅವರನ್ನು ಪ್ರಶ್ನಿಸಿದಾಗ, ನಾವು ಐಆರ್‌ಡಿಎ ಮಾರ್ಗದರ್ಶಿ ಸೂತ್ರದಂತೆ ಎನ್‌ಜಿಒಗಳನ್ನು ನೇಮಿಸಿದ್ದೇವೆ. ಕೆಲವು ಕಡೆಗಳಲ್ಲಿ ಈ ವಿಮಾ ಪ್ರತಿನಿಧಿ ಸಂಸ್ಥೆ ಪಾಲಿಸಿದಾರರಿಗೆ ಮೋಸ ಮಾಡಿರುವುದು ಈಗ ಗೊತ್ತಾಗಿದೆ. ಮೈಸೂರು, ಬೆಂಗಳೂರು ಸೇರಿದಂತೆ ಉಳಿದ ವಿಭಾಗಗಳಲ್ಲೂ ಇದೇ ರೀತಿ ಪ್ರಕರಣ ವರದಿಯಾಗಿದೆ.

ಉಡುಪಿ ವಿಭಾಗದಲ್ಲೂ ನಾವೂ ಈ ಬಗ್ಗೆ ತಿಳಿದ ತಕ್ಷಣ 2014ರಲ್ಲೇ ಕಡೂರು ಮತ್ತು ತರಿಕೆರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದೇವೆ. ಅದೀಗ ತನಿಖಾ ಹಂತದಲ್ಲಿದೆ. ಅವರು ಕೇಳಿದ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿದ್ದೇವೆ. ನಮಗೆ ಈ ಎಜೆಂಟ್‌ರೊಂದಿಗೆ ಮಾತ್ರ ಸಂಪರ್ಕ ವಿರುವುದಿಂದ ಅವರ ವಿರುದ್ಧ ಮಾತ್ರ ಕೇಸು ದಾಖಲಿಸಿದ್ದೇವೆ. ತನಿಖೆ ಶೀಘ್ರವೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ತನ್ನ ಯೋಜನೆಯೊಂದರಲ್ಲಾದ ಹಗರಣದಿಂದ ಎಚ್ಚೆತ್ತುಕೊಂಡಿರುವ ಎಲ್ಲೈಸಿ ಇದೀಗ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಿ ಬಿಗುಗೊಳಿಸಿದೆ. ಸೂಕ್ಷ್ಮವಿಮಾದ ಪ್ರೀಮಿಯಂನ್ನು ಏಜೆಂಟ್ ಬಳಿ ನೀಡದೇ, ನಾವೇ ಅಧಿಕೃತವಾಗಿ ನೇಮಿಸಿದ ಪ್ರೀಮಿಯಂ ಪಾಯಿಂಟ್‌ಗಳಲ್ಲಿ ಕಟ್ಟಲು ಅವಕಾಶ ನೀಡಿ ಅದೇ ದಿನ ಹಣ ಎಲ್ಲೈಸಿಗೆ ಜಮಾ ಆಗುವಂತೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News