ಯುವ ಬ್ರಿಗೇಡ್‌ನ ‘ಕನಕ ನಡೆ’ ವಿರುದ್ಧ ಡಿಸಿಗೆ ದೂರು

Update: 2016-10-24 15:50 GMT

ಉಡುಪಿ, ಅ.24: ಜಿಲ್ಲಾದಂಡಾಧಿಕಾರಿಯವರ ಅನುಮತಿ ನಿರಾಕರಣೆ ಯನ್ನು ಕಡೆಗಣಿಸಿ ಸಾರ್ವಜನಿಕ ರಸ್ತೆಯಾದ ರಥಬೀದಿಯಲ್ಲಿ ಕನಕ ನಡೆ ಕಾರ್ಯಕ್ರಮ ನಡೆಸಿದ ಯುವ ಬ್ರಿಗೇಡ್ ಸಂಘಟನೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿತು.

ಚಲೋ ಉಡುಪಿ ಕಾರ್ಯಕ್ರಮದ ನಂತರ ಉಡುಪಿ ಬೀದಿಗಳನ್ನು ಸ್ವಚ್ಛ ಗೊಳಿಸುವುದಾಗಿ ಘೋಷಿಸುವ ಮೂಲಕ ಸಾರ್ವಜನಿಕವಾಗಿ ಅಸ್ಪಶ್ಯತೆ ಆಚರಣೆಗೆ ಬಹಿರಂಗ ಕರೆಕೊಟ್ಟ ಯುವ ಬ್ರಿಗೇಡ್‌ನ ಮಿಥುನ್ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಲಿತ ದೌರ್ಜನ್ಯ ಕಾಯಿದೆ ಯಡಿ ಪ್ರಕರಣ ದಾಖಲಿಸಬೇಕು ಹಾಗೂ ದಲಿತ ವಿರುದ್ಧ ಪ್ರಚೋದನಕಾರಿ ಮಾತನಾಡಿ ಸಾರ್ವಜನಿಕ ಶಾಂತಿ ಕದಡುವ ಚಕ್ರವರ್ತಿ ಸೂಲಿಬೆಲೆಗೆ ಉಡುಪಿ ಜಿಲ್ಲೆ ಪ್ರವೇಶಿಸಿದಂತೆ ನಿಷೇಧ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಚಲೋ ಉಡುಪಿ ಕಾರ್ಯಕ್ರಮದಲ್ಲಿ ಪಂಕ್ತಿಬೇಧ ಅನುಸರಿಸುವ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಕರೆ ನೀಡಿದ್ದೇವೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ಸಂಘಟನೆಯ ನಾಯಕರು ಹಾಗೂ ಕಾರ್ಯಕರ್ತರು ಉಡುಪಿ ಪ್ರವೇಶಿಸಲು ಹಾಗೂ ಪ್ರವೇಶಿಸಿದರೆ ಹೊರ ಹೋಗಲು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಯೊಡ್ಡಿರುವ ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳ ಸಂಚಾಲಕ ದಿನೇಶ್ ಮೆಂಡನ್, ಯುವ ಬ್ರಿಗೇಡ್‌ನ ವಾಸುದೇವ ಭಟ್, ಶ್ರೀರಾಮ ಸೇನೆಯ ಮುತಾಲಿಕ್, ಮಾಜಿ ಶಾಸಕ ಕೆ.ರಘುಪತಿ ಭಟ್ ವಿರುದ್ಧ ಗೂಂಡಾ ಕಾಯಿದೆಯಡಿ ಕ್ರಮ ಜರಗಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಕನಕ ನಡೆಯ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದರಲ್ಲಿ ಕಾನೂನು ಉಲ್ಲಂಘನೆ ಕಂಡುಬಂದರೆ ಮುಂದಿನ ಕಾನೂನು ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಹುಸೇನ್ ಕೋಡಿಬೆಂಗ್ರೆ, ವಿಶ್ವನಾಥ ಪೇತ್ರಿ, ಸುಂದರ ಕಪ್ಪೆಟ್ಟು, ಪರಮೇಶ್ವರ ಉಪ್ಪೂರು, ಎಸ್.ಎಸ್.ಪ್ರಸಾದ್, ಜಿ.ರಾಜಶೇಖರ್, ಫಣಿರಾಜ್, ಜಯನ್ ಮಲ್ಪೆ, ಗಣೇಶ್ ನೆರ್ಗಿ, ಯುವರಾಜ್, ಎಸ್. ನಾರಾಯಣ, ಅಬ್ದುಲ್ ಅಝೀಝ್, ದಿನಕರ ಬೆಂಗ್ರೆ, ಶಶಿಧರ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News