ವ್ಯಾಪಾರಕ್ಕೆ ಬದಲಿ ವ್ಯವಸ್ಥೆ ಮಾಡಲು ಆಗ್ರಹಿಸಿ ವ್ಯಾಪಾರಿಗಳಿಂದ ಧರಣಿ

Update: 2016-10-24 16:07 GMT

ಪುತ್ತೂರು, ಅ.24: ಪುತ್ತೂರಿನ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರವೇ ಇಲ್ಲದ ಕಾರಣ ನಮಗೆ ನಗರದಲ್ಲಿ ಸಂತೆ ವ್ಯಾಪಾರ ನಡೆಸಲು ಬದಲಿ ವ್ಯವಸ್ಥೆ ಮಾಡಿ ಕೊಡಿ ಎಂದು ಆಗ್ರಹಿಸಿ ಎಪಿಎಂಸಿ ಪ್ರಾಂಗಣದಲ್ಲಿ ಸಂತೆ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ಸೋಮವಾರ ಸಂಜೆ ಸಂತೆ ವ್ಯಾಪಾರ ಸ್ಥಗಿತಗೊಳಿಸಿ ಬಂದು ನಗರಸಭೆಯ ಎದುರು ದಿಢೀರ್ ಧರಣಿ ನಡೆಸಿದರು.

ಮುಂದಿನ ಸೋಮವಾರದ ಒಳಗಾಗಿ ಪುತ್ತೂರು ನಗರದಲ್ಲಿಯೇ ವಾರದ ಸಂತೆ ವ್ಯಾಪಾರ ಮಾಡಲು ಬದಲಿ ವ್ಯವಸ್ಥೆ ಮಾಡಿಕೊಡದಿದ್ದಲ್ಲಿ ಸೋಮವಾರ ಕಿಲ್ಲೆ ಮೈದಾನಕ್ಕೆ ಬಂದು ಅಲ್ಲಿಯೇ ಸಂತೆ ವ್ಯಾಪಾರ ಮಾಡುತ್ತೇವೆ ಎಂದು ಮಹಾಲಿಂಗೇಶ್ವರ ದೇವರಾಣೆ ಮಾಡಿ ಶಪಥ ಹಾಕಿದ ವ್ಯಾಪಾರಿಗಳು ಹೊಡೆದು ಕೊಲ್ಲುವುದಾದರೆ ಕೊಲ್ಲಿ, ಪ್ರಾಣ ಹೋದರೂ ಬಿಡುವುದಿಲ್ಲ, ಎಷ್ಟು ಮಂದಿಯನ್ನು ಸಾಯಿಸುತ್ತೀರೋ ನೊಡೋಣ ಎಂದು ಸವಾಲು ಹಾಕಿದರು.

ಪುತ್ತೂರು ನಗರದಲ್ಲಿನ ಸಂತೆ ಬಜಾರ್ ವಾರದ ಸಂತೆಗೆ ಪರಿಹಾರವಲ್ಲ, ವಾರದ ಸಂತೆ ನಡೆಸುತ್ತಿರುವ 500 ಮಂದಿ ವ್ಯಾಪಾರಿಗಳಿಗೆ ಇದರಿಂದಾಗಿ ಸಮಸ್ಯೆಯಾಗಿದೆ ಎಂದು ಆರೋಪಿಸಿದ ವ್ಯಾಪಾರಿಗಳು ಪುತ್ತೂರು ನಗರದಲ್ಲಿನ ತರಕಾರಿ ಬಜಾರ್‌ಗಳನ್ನು ತೆರವುಗೊಳಿಸಬೇಕು. ವಾರದ ಸಂತೆಗೆ ನಗರದಲ್ಲಿ ಬದಲಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಧರಣಿಯ ವೇಳೆ ಮನವಿ ಸ್ವೀಕರಿಸಲು ಬಂದ ನಗರಸಭೆಯ ಅಧ್ಯಕ್ಷೆಗೆ ಮನವಿ ಸಲ್ಲಿಸಿದ ವ್ಯಾಪಾರಿಗಳು ಸಂತೆ ಸ್ಥಳಾಂತರದಿಂದಾಗಿ ತಮಗಾದ ಸಮಸ್ಯೆಯನ್ನು ವಿವರಿಸಿದರು.

ಬದಲಿ ವ್ಯವಸ್ಥೆ ಮಾಡುತ್ತೇವೆ : ಅಧ್ಯಕ್ಷೆ

ಮನವಿ ಸ್ವೀಕರಿಸಿದ ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ, ವಾರದ ಸಂತೆಗೆ ಬದಲಿ ವ್ಯವಸ್ಥೆ ಮಾಡುವ ಪ್ರಯತ್ನ ನಡೆಸುತ್ತಿದ್ದೇವೆ. ಹಂತಹಂತವಾಗಿ ಬೇರೆ ಕಡೆ ವ್ಯವಸ್ಥೆ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಗೂಬೆ ಕೂರಿಸುವ ಷಡ್ಯಂತ್ರ: ಅಲಿ

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಂತೆ ಮಾಡಬಾರದು ಎಂಬ ತೀರ್ಮಾನ ಮಾಡಿದ್ದು ನಗರಸಭೆಯಲ್ಲ. ಸಮಸ್ಯೆಗೆ ಕಾರಣ ನಾವಲ್ಲ. ಉಪವಿಭಾಗಾಧಿಕಾರಿಗಳೇ ಇಲ್ಲಿ ಸಂತೆಗೆ ನಿರ್ಬಂಧ ಹೇರಿದ್ದು. ಆದರೆ ಇಲ್ಲಿ ನಗರಸಭೆಯ ಮೇಲೆ ಗೂಬೆ ಕೂರಿಸುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಎಪಿಎಂಸಿ ಪ್ರಾಂಗಣಕ್ಕೆ ವ್ಯಾಪಾರಿಗಳು ಬರುತ್ತಿಲ್ಲ, ಅಲ್ಲಿ ವ್ಯಾಪಾರವೂ ಇಲ್ಲ, ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂಬುವುದು ನಮಗೆ ತಿಳಿದಿದೆ ಎಂದರು.

ಸಂತೆಯನ್ನು ಉಳಿಸಲೇ ಬೇಕು ಎಂದು ನಿಮ್ಮನ್ನು ದಾರಿ ತಪ್ಪಿಸಿ ರಾಜಕೀಯ ಮಾಡಲು ಹೊರಟವರ ಹಾಗೆ ನಾವಲ್ಲ. ಸಂತೆಗೆ ಬದಲಿ ವ್ಯವಸ್ಥೆ ಮಾಡಿಯೇ ಮಾಡುತ್ತೇವೆ ಎಂದು ನಗರಸಭೆಯ ಸದಸ್ಯ ಎಚ್.ಮಹಮ್ಮದ್ ಅಲಿ ಹೇಳಿದರು.

ನಗರಸಭೆಯ ಕಚೇರಿಯ ತಳ ಅಂತಸ್ತಿನಲ್ಲಿ ಕೇವಲ 30 ಮಂದಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶವಿರುವುದರಿಂದ ಅದು ಪರಿಹಾರವಲ್ಲ. ತರಕಾರಿ ಬಜಾರ್ ಕೂಡ ಸಮಸ್ಯೆಗೆ ಪರಿಹಾರವಲ್ಲ . ನಾವು ತರಕಾರಿ ಬಜಾರ್‌ಗೆ ಬೀಗ ಹಾಕುವ ಕೆಲಸ ಮಾಡಿದ್ದೇವೆ. ಆದರೆ ಹೈಕೊರ್ಟು ತಡೆಯಾಜ್ಞೆ ತಂದ ಕಾರಣ ಕಾನೂನು ಹೋರಾಟದ ಮೂಲಕವೇ ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ ಅವರು ದೇವಾಲಯದ ಗದ್ದೆಯಲ್ಲಿ ಸಂತೆ ವ್ಯಾಪಾರ ನಡೆಸುವುದರಿಂದ ಧಾರ್ಮಿಕ ಮತ್ತು ಭಕ್ತರ ಭಾವನೆಗೆ ತೊಂದರೆಯಾಗುವುದಾದರೆ ನಾವು ಅಲ್ಲಿ ಸಂತೆ ಮಾಡಲು ಹೋಗುವುದೇ ಇಲ್ಲ. ಯಾರನ್ನೂ ನೋಯಿಸುವ ಕೆಲಸ ಮಾಡುವುದಿಲ್ಲ ಎಂದರು.

ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂತೆ ವ್ಯಾಪಾರ ನಡೆಸಲು ಸೂಕ್ತ ಸ್ಥಳದ ಹುಡುಕಾಟ ಕೆಲಸ ನಡೆದಿದೆ. ಖಾಸಗಿ ವ್ಯಕ್ತಿಯೊಬ್ಬರ ಜಮೀನನ್ನು ಬಾಡಿಗೆ ಆಧಾರದಲ್ಲಿ ಪಡೆದು ಸಂತೆ ವ್ಯವಸ್ಥೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಎರಡು ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದ್ದು, ಶೀಘ್ರವೇ ಸಮಸ್ಯೆ ಪರಿಹಾರವಾಗಲಿದೆ ಎಂದು ಅವರು ಭರವಸೆ ನೀಡಿದರು.

ಪುತ್ತೂರು ನಗರದ ರಸ್ತೆ ಬದಿಗಳಲ್ಲಿ ಇಂದು ಕೆಲವು ಮಂದಿ ನಡೆಸಿದ ಸಂತೆಯನ್ನು ತೆರವುಗೊಳಿಸದ ಕಾರ್ಯಾಚರಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಉಪವಿಭಾಗಾಧಿಕಾರಿಗಳು ಅಧಿಕಾರಿಗಳನ್ನು ಸೇರಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಸಂತೆ ವ್ಯಾಪಾರಿಗಳಾದ ಮಂಜುನಾಥ್ ಹಾಸನ, ಪುಟ್ಟುರಾಜ್ ಹಾಸನ, ನಝೀರ್ ಕೊಯಿಲ, ಅಶ್ರಫ್ ಉಪ್ಪಿನಂಗಡಿ, ವೆಂಕಟೇಶ್ ನಾಗಮಂಡಲ, ಮೋಹನ್ ಪುತ್ತೂರು, ರಾಜೇಂದ್ರ ಶಿವಮೊಗ್ಗ ಮೊದಲಾದವರ ನೇತೃತ್ವದಲ್ಲಿ ಸಂತೆ ವ್ಯಾಪಾರಿಗಳು ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News