ಉಡುಪಿಯಲ್ಲಿ ಈಗ ಯಾವುದೇ ಗೊಂದಲಗಳಿಲ್ಲ: ಸಚಿವ ರುದ್ರಪ್ಪ ಲಮಾಣಿ

Update: 2016-10-24 16:20 GMT

ಬೆಳ್ತಂಗಡಿ, ಅ.24: ಉಡುಪಿಯಲ್ಲಿ ಈಗ ಯಾವುದೇ ಗೊಂದಲಗಳಿಲ್ಲ ಕನಕ ನಡೆಯ ಬದಲು ಸ್ವಚ್ಛತಾ ಕಾರ್ಯಕ್ರಮ ನಡೆದಿದೆ. ಸ್ವಾಮೀಜಿಯವರು ದಲಿತರ ಶೋಷಿತರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿಸಿದ್ದಾರೆ ಎಂದು ರಾಜ್ಯ ಸರಕಾರದ ಮುಜರಾಯಿ ಸಚಿವ ರುದ್ರಪ್ಪಲಮಾಣಿ ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಮಠಗಳನ್ನು ವಶಕ್ಕೆ ತೆಗೆದುಕೊಳ್ಳುವವ ಗುರಿ ಸರಕಾರಕ್ಕಿಲ್ಲ. ಈ ವಿಚಾರವನ್ನು ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟ ಪಡಿಸಿದ್ದಾರೆ. ರಾಮಚಂದ್ರಾಪುರ ಮಠದ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾಖಲೆಗಳಿಗೆ ಅನುಗುಣವಾಗಿ ಸರಕಾರದ ವಕೀಲರು ಅಭಿಪ್ರಾಯ ನೀಡಿದ್ದಾರೆ ಅಷ್ಟೇ. ನ್ಯಾಯಾಲಯದ ತೀರ್ಮಾನದಂತೆ ಮುಂದೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಮೂಢನಂಬಿಕೆ ಕಾಯ್ದೆಯೆಂಬುದು ಜೇನುಗೂಡಿಗೆ ಕೈಹಾಕುವಂತಹ ವಿಚಾರವಾಗಿದೆ. ಈ ಬಗ್ಗೆ ಇನ್ನೂ ಚಿಂತನೆಗಳನ್ನು ನಡೆಸಿ ಈ ಬಗ್ಗೆ ನಿರ್ಥಾರ ಕೈಗೊಳ್ಳಲಾಗುವುದು ಎಂದರು. ದೇವಸ್ಥಾನಗಳ ಆಡಳಿತ ಸಮಿತಿಗಳ ರಚನೆ ಕಾರ್ಯ ಬಹುತೇಕ ನಡೆದಿದ್ದು ಕೆಲವೇ ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆಯ ಅನುಷ್ಠಾನಕ್ಕೆ ಯೋಜನೆಯನ್ನು ರೂಪಿಸಲಾಗುವುದು. ಧರ್ಮಸ್ಥಳದ ಮಾದರಿಯಾಗಿಸಿ ಇದನ್ನು ಮಾಡಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದೆ. ಇದನ್ನು ಪರಿಹರಿಸಿ ಸ್ವಚ್ಛತೆಗೆ ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News