×
Ad

ಆತ್ಮಹತ್ಯೆ ರಾಜ್ಯವಾಗಿ ಬದಲಾಯಿಸಿದ ಕೀರ್ತಿ ಸಿದ್ದರಾಮಯ್ಯ ಸರಕಾರಕ್ಕೆ ಸಲ್ಲುತ್ತದೆ: ಸಂಜೀವ ಮಠಂದೂರು

Update: 2016-10-24 23:40 IST

ಪುತ್ತೂರು, ಅ.24: ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೊಳಿಸಿದ್ದ ಕಲ್ಯಾಣ ಕಾರ್ಯಕ್ರಮಗಳನ್ನೆಲ್ಲ ಬದಿಗೆ ಸರಿಸಿ ಕರ್ನಾಟಕವನ್ನು ಆತ್ಮಹತ್ಯೆ ರಾಜ್ಯವಾಗಿ ಬದಲಾಯಿಸಿದ ಕೀರ್ತಿ ಸಿದ್ದರಾಮಯ್ಯ ಸರಕಾರಕ್ಕೆ ಸಲ್ಲುತ್ತದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಆಪಾದಿಸಿದರು.

ಪುತ್ತೂರು ಕಲ್ಲಾರೆ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ಸೋಮವಾರ ನಡೆದ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 1,700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇರಳಕ್ಕೆ ಮಾತ್ರ ಸೀಮಿತವಾಗಿದ್ದ ರಾಜಕೀಯ ಹತ್ಯಾಕಾಂಡದ ರಕ್ತ ಸಿಕ್ತ ಅಧ್ಯಾಯ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಕೆ.ಜೆ. ಜಾರ್ಜ್ ಮತ್ತೆ ಮಂತ್ರಿಯಾಗಿ ಮರಳಿದ್ದು ಶಕುನಿ ಪ್ರವೇಶವಾದಂತಾಗಿದೆ. ಅವರು ಹಿಂಬಾಗಿಲಿನಿಂದ ಮತ್ತೆ ಪ್ರವೇಶ ಮಾಡಿದ್ದು, ಸಿದ್ದು ಸರಕಾರದ ಎಟಿಎಂನಂತೆ ಜಾರ್ಜ್ ಕೆಲಸ ಮಾಡುತ್ತಿದ್ದಾರೆ. ಅವರಿಲ್ಲದಿದ್ದರೆ ಈ ಸರಕಾರ ಚಾರ್ಜ್ ಆಗುತ್ತಿಲ್ಲ ಎಂದು ಆಪಾದಿಸಿದರು.

ಅನ್ನಭಾಗ್ಯದ ಹೆಸರಿನಲ್ಲಿ ಕೂಪನ್ ಭಾಗ್ಯ ಜಾರಿಗೆ ತಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಸರಕಾರ, ಅಹಿಂದದ ಹೆಸರಿನಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಸುತ್ತಿದೆ. ಮತಾಂಧ ರಾಜ ಟಿಪ್ಪುಸುಲ್ತಾನ್ ಜನ್ಮ ದಿನಾಚರಣೆ ಇದರ ಒಂದು ಭಾಗ. ಟಿಪ್ಪು ಮಾಡಿದಷ್ಟು ಶ್ರದ್ಧಾ ಕೇಂದ್ರಗಳ ನಾಶ, ಮತಾಂತರ ಕೆಲಸವನ್ನು ಯಾವ ಮುಸ್ಲಿಂ ರಾಜನೂ ಮಾಡಿರಲಿಲ್ಲ. ಕ್ರೈಸ್ತ ಸಮುದಾಯ ಕೂಡಾ ಟಿಪ್ಪು ಜನ್ಮ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಇದಾವುದನ್ನೂ ಸರಕಾರ ಗಮನಿಸದೇ ಇರುವುದು ವಿಪರ್ಯಾಸ ಎಂದರು.

ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದ ಬಿಜೆಪಿ ಎಸ್ಸಿ-ಎಸ್ಟಿ ಮೋರ್ಚಾ ಸಮಾವೇಶ ಭರ್ಜರಿ ಯಶಸ್ವಿಯಾಗಿದೆ. ನವೆಂಬರ್ 24ರಂದು ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಐದು ಲಕ್ಷ ಜನ ಭಾಗವಹಿಸಲಿದ್ದಾರೆ. ಈ ರೀತಿಯ ಇತಿಹಾಸ ನಿರ್ಮಾಣ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಮೆರೆಯುವ ಬಗ್ಗೆ ಮಾಧ್ಯಮ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದನ್ನು ಇನ್ನಷ್ಟು ಹೆಚ್ಚಿಸಲು ಕಾರ್ಯಕರ್ತರು ಕೆಲಸ ಮಾಡಬೇಕು ಎಂದವರು ಕಿವಿಮಾತು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮುಂದಿನ ಡಿಸೆಂಬರ್ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ ಪಂಚ ತೀರ್ಥಯಾತ್ರೆ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಡಿಸೆಂಬರ್ 3ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭವಾಗಲಿರುವ ಯಾತ್ರೆಯು ಡಿ.5ರಂದು ಕಟೀಲಿನಲ್ಲಿ ಸಮಾಪನಗೊಳ್ಳಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವರಂಜನ್, ಹಿರಿಯ ಮುಖಂಡ ಯು.ಪೂವಪ್ಪ, ಪಕ್ಷದ ಪ್ರಮುಖರಾದ ಶೈಲಜಾ ಭಟ್, ಅಪ್ಪಯ್ಯ ಮಣಿಯಾಣಿ, ಕೇಶವ ಗೌಡ ಬಜತ್ತೂರು, ಶಂಭು ಭಟ್, ಪುತ್ತೂರು ಮಂಡಲ ಪ್ರಭಾರಿ ರವಿಶಂಕರ್ ಮಿಜಾರ್ ವೇದಿಕೆಯಲ್ಲಿದ್ದರು.

ತಾ.ಪಂ.ಸದಸ್ಯ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿದರು. ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ನಿತೀಶ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News