×
Ad

ಅ.30ರಂದು ಬಂಟ್ವಾಳದ ಬಂಟರ ಭವನ ಉದ್ಘಾಟನೆ

Update: 2016-10-25 12:06 IST

ಮಂಗಳೂರು, ಅ.25: ಬಂಟ್ವಾಳದ ಬಂಟರ ಸಂಘದ ವತಿಯಿಂದ ಮಂಗಳೂರು ಹೊರವಲಯದ ತುಂಬೆ ವಳವೂರಿನಲ್ಲಿ ನಿರ್ಮಾಣಗೊಂಡ  ಹವಾನಿಯಂತ್ರಿತ ‘ಬಂಟರ ಭವನ’ ಅ.30ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸಭಾಭವನದ  ಉದ್ಘಾಟನಾ ಸಮಾರಂಭವು ಅ.29ರಿಂದ 31ರವರೆಗೆ ನಡೆಯಲಿದೆ. ಅ.29ರಂದು ಅಪರಾಹ್ನ 3 ಗಂಟೆಗೆ ಹೊರೆದಿಬ್ಬಣ ಶೋಭಾಯಾತ್ರೆ ನಡೆಯಲಿದ್ದು, ಸಚಿವ ರಮಾನಾಥ ರೈ ದಿಬ್ಬಣವನ್ನು ಉದ್ಘಾಟಿಸಲಿದ್ದಾರೆ. ಶೋಭಾಯಾತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಲಿದ್ದಾರೆ ಎಂದರು.

ಅ.30ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಂಟರ ಭವನವನ್ನು ಉದ್ಘಾಟಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ ಬಂಟ ಮಹಿಳೆಯರ ಸಂಗಮ ಕಾರ್ಯಕ್ರಮ ನಡೆಯಲಿದೆ. ಬಂಟರ ಸಾಧನೆಯನ್ನು ಬಿಂಬಿಸುವ ‘ಕರಜನ’ ಸ್ಮರಣಸಂಚಿಕೆಯೂ ಈ ಸಂದರ್ಭ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.

ಅ.31ರಂದು ಧರ್ಮ ಸಾಮರಸ್ಯ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತದ ಅಧ್ಯಕ್ಷ ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭ ಸನ್ಮಾನಿಸಲಾಗುವುದು ಎಂದು ವಿವೇಕ್ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷರಾದ ಕಿರಣ್ ಹೆಗ್ಡೆ ಅನಂತಾಡಿ, ಪ್ರಫುಲ್ಲ ಆರ್. ಶೆಟ್ಟಿ ವಿಠಲಕೋಡಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾ, ಕಾರ್ಯದರ್ಶಿ ಚಂದ್ರಹಾಸ್ ಡಿ.ಶೆಟ್ಟಿ ರಂಗೋಲಿ, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ್ ರೈ ಬಾಲಾಜಿಬೈಲು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News