ಸುರತ್ಕಲ್: ಪರವಾನಿಗೆ ರಹಿತ ಅಂಗಡಿಗಳಿಗೆ ಬೀಗ
ಸುರತ್ಕಲ್, ಅ.25: ಮಂಗಳೂರು ಮಹಾ ನಗರಪಾಲಿಕೆ ನಗರಾಭಿವೃದ್ಧಿ ಆರೋಗ್ಯ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಪರವಾನಿಗೆ ರಹಿತ ಮತ್ತು ಸ್ವಚ್ಛತೆ ಕಾಪಾಡದ ಹಲವು ಅಂಗಡಿಗಳು ಮತ್ತು ಹೊಟೇಲ್‌ಗಳಿಗೆ ನೋಟೀಸ್ ನೀಡಿ, ದಂಡ ವಿಧಿಸಿದೆ.
ಮನಪಾ ಆರೋಗ್ಯ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದ ತಂಡ ಮನಾಪಾ ವ್ಯಾಪ್ತಿಯ ಸುರತ್ಕಲ್ ಪ್ರದೇಶದಲ್ಲಿ ಹಲವು ಅಂಗಡಿಗಳಿಗೆ ದಾಳಿ ನಡೆಸಿ ಪರವಾನಿಗೆ ಪರಿಶೀಲಿಸಿತು. ಆ ವೇಳೆ ಕೆಲವೊಂದು ಅಂಗಡಿಗಳಲ್ಲಿ ಪರವಾನಿಗೆ ಇಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕರಣಗಳು ಪತ್ತೆಯಾದವು. ಅಲ್ಲದೆ, ಪರವಾನಿಗೆ ನವೀಕರಿಸದೆ ಅಂಗಡಿ ಚಲಾಯಿಸುತ್ತಿದ್ದ ಪ್ರಕರಣಗಳೂ ಬೆಳಕಿಗೆ ಬಂದವು. ಅಂತಹ ಅಂಗಡಿಗಳಿಗೆ ನೋಟಿಸ್ ಜಾರಿಗೊಳಿಸಿದರು. ಮತ್ತು ಸುಮಾರು 5 ಅಂಗಡಿಗಳಿಗೆ ಬೀಗ ಜಡಿಯಲಾಯಿತು.
ಅಲ್ಲದೆ, ಇದೇ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಹೋಟೆಲ್ ಸದಾನಂದ್‌ಗೆ ದಾಳಿ ನಡೆಸಿದ ತಂಡ ಪರಿಶೀಲನೆ ನಡೆಸಿ ಹೊಟೇಲ್‌ನ ತ್ಯಾಜ್ಯದ ನೀರನ್ನು ಹಿಂಭಾಗದ ಚರಂಡಿಯಲ್ಲಿ ಹರಿಯಬಿಡಲಾಗುತ್ತಿದ್ದ ಹಿನ್ನೆಲೆಯಲ್ಲಿ ಹೊಟೇಲ್‌ಗೆ ನೋಟೀಸ್ ಜಾರಿ ಗೊಳಿಸಿ ಶೀಘ್ರ ಸರಿಪಡಿಸುವಂತೆ ಸೂಚಿಸಿದೆ.
ಅಲ್ಲದೆ, ಸುರತ್ಕಲ್ನ ಸಿಟಿ ಲಂಚ್ ಹೋಟೇಲ್‌ಗೆ ದಾಳಿ ನಡೆಸಿದ ತಂಡ ಹೊಟೇಲ್ ಹಾಗೂ ಚರಂಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿತು. ಈ ಸಂದರ್ಭ ಹೊಟೇಲ್ ತ್ಯಾಜ್ಯ ನೀರನ್ನು ಹೊಟೇಲ್‌ನ ಹಿಂಭಾಗದಲ್ಲಿ ಶೇಖರಿಸಿಟ್ಟ ಟ್ಯಾಂಕ್‌ಗಳು ತುಂಬಿ ಬಳಿಕ ಅದರಿಂದ ಯಾವುದೇ ಒಳಚಂಡಿಯ ವ್ಯವಸ್ಥೆ ಇಲ್ಲದೆ, ಬಳಿಯಲ್ಲಿರುವ ಕೆರೆಯೊಂದರಲ್ಲಿ ತುಂಬಿಸಿರುವುದನ್ನು ಕಂಡ ಕವಿತಾ ಸನಿಲ್ ನೇತೃತ್ವದ ತಂಡ ಸ್ಥಳದಲ್ಲೇ 15 ಸಾವಿರ ರೂ. ದಂಡ ವಿಧಿಸಿ ವಾಪಸ್ಸಾಗಿದೆ. ಅಲ್ಲದೆ, ಅದೇ ಭಾಗದಲ್ಲಿರುವ ಹೊಟೆಲ್ ನ್ಯೂ ಆದರ್ಶ್‌ಗೆ ದಾಳಿ ನಡೆಸಿದ್ದು, ಅಲ್ಲಯೂ ಹೊಟೆಲ್‌ನ ಹಿಂಭಾಗದಲ್ಲಿ ತ್ಯಾಜ್ಯ ನೀರನ್ನು ತೆರೆದ ರೂಪದಲ್ಲಿ ಸಂಗ್ರಹಿಸಿರುವುದನ್ನು ಪರಿಶೀಲಿಸಿತು. ಸ್ಥಳದಲ್ಲಿಯೇ ಆದರ್ಶ್ ಹೊಟೇಲ್‌ಗೂ 15 ಸಾವಿರ ರೂ. ದಂಡ ವಿಧಿಸಿದೆ.
ದಾಳಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನಪಾ ಆರೋಗ್ಯ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ಮನಪಾ ವ್ಯಾಪ್ತಿಯ ಸುರತ್ಕಲ್ ಪ್ರದೇಶದ ಸುಮರು 400 ಉದ್ದಿಮೆಗಳು ಪರವಾನಿಗೆ ನವೀಕರಿಲು ಬಾಕಿಇದ್ದವು. ಅಲ್ಲದೆ, ಅವುಗಳಲ್ಲಿ ಸುಮರು 115 ಅಂಗಡಿ, ಉದ್ದಿಮೆಗಳು ತೆರಿಗೆ ಕಟ್ಟುವ ಗೋಜಿಗೇ ಹೋಗಿಲ್ಲ. 2 ತಿಂಗಳ ಮೊದಲೇ ಎಲ್ಲಾ ಬಾಕಿದಾರರಿಗೆ ಪರವಾನಿಗೆ ರಹಿತರಿಗೆ ನೊಟೀಸ್ ನೀಡಿ ಸೂಚನೆ ನೀಡಲಾಗಿತ್ತು. ಆದರೂ ತಪ್ಪುಗಳನ್ನು ತಿದ್ದಿಕೊಳ್ಳೂವ ಗೋಜಿಗೆ ಹೋಗದಿದ್ದ ಕಾರಣ ಅಂತಹ ಅಂಗಡಿ ಮಳಿಗೆಳಿಗೆ ಬೀಗ ಜಡಿಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಎಡಿಬಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದ ಕಾರಣ ಈ ಅವ್ಯವಸ್ಥೆ ಉದ್ಭವಿಸಿದೆ ಎಂದು ಹೊಟೇಲ್ ಮಾಲಕರು ದೂರಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕವಿತ ಸನಿಲ್, ಎಡಿಬಿ ಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮತ್ತು ಅದು ಆರೋಗ್ಯ ಸ್ಥಾಯಿ ಸಮಿತಿಗೆ ಒಳಪಡುವುದಿಲ್ಲ ಎಂದು ನುಣುಚಿಕೊಂಡರು.