ಎನ್ ಡಿಎ ಸರಕಾರಕ್ಕೆ ಗೋರಿಕಟ್ಟುವ ಕೆಲಸ ಮೋದಿಯಿಂದ ಆರಂಭ: ಹಾಜಿ ಹಮೀದ್ ಕಂದಕ್

Update: 2016-10-25 07:42 GMT

ಮಂಗಳೂರು, ಅ.25: ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಪ್ರಯತ್ನಿಸುವ ಮೂಲಕ ಪ್ರಧಾನಿ ಮೋದಿಯವರು ಕೇಂದ್ರದ ಎನ್ ಡಿಎ ಸರಕಾರಕ್ಕೆ ಗೋರಿಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅಂಜುಮಾನ್ ಖಾದಿಮುಲ್ ಮುಸ್ಲಿಮೀನ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಹಮೀದ್ ಕಂದಕ್ ಅಭಿಪ್ರಾಯಪಟ್ಟಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದು ಸೃಷ್ಟಿಕರ್ತನಿಗೆ ಗೊತ್ತಿದೆ. ಜಾತ್ಯತೀತ ದೇಶದಲ್ಲಿ ವಾಸಿಸುವ ಯಾವುದೇ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯಾವ ವ್ಯಕ್ತಿ, ಸರಕಾರಕ್ಕೂ ಹಕ್ಕಿಲ್ಲ. ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಾರತದ ಸಂವಿಧಾನ ಲಿಖಿತ ಪ್ರಾಧಾನ್ಯತೆಯನ್ನು ನೀಡಿದೆ. ದೇಶದಲ್ಲಿರುವ ಆಯಾ ಧರ್ಮದವರು ಅವರವರ ಧಾರ್ಮಿಕ ಆಚಾರಗಳನ್ನು ಸಂವಿಧಾನಬದ್ಧವಾಗಿ ಆಚರಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದರು.

ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ತಾಂಡವವಾಡುತ್ತಿರುವಾಗ ತಲಾಕ್ ಮಾತ್ರ ದೇಶದ ದೊಡ್ಡ ಸಮಸ್ಯೆ ಎನ್ನುವಂತೆ ಬಿಜೆಪಿ ಸರಕಾರ ಬಿಂಬಿಸುತ್ತಿರುವುದರಲ್ಲಿ ಅರ್ಥವಿಲ್ಲ. ಇಸ್ಲಾಂ ಸಾರ್ವತ್ರಿಕವಾದ ಧರ್ಮ.ಆಯಾ ಪ್ರದೇಶ, ದೇಶಕ್ಕನುಸಾರವಾಗಿ ಬದಲಾಯಿಸುವಂತದ್ದಲ್ಲ. 1451 ವರ್ಷಗಳಲ್ಲಿ ಯಾವುದೇ ಬದಲಾವಣೆಗೆ ಒಳಪಡದ ಧರ್ಮದ ಸಂಪ್ರದಾಯವನ್ನು ಕೆಲವರ ಒತ್ತಡಕ್ಕೆ ಮಣಿದು ಬದಲಾಯಿಸಲು ಯತ್ನಿಸಿದರೆ ಮುಂದಿನ ದಿನಗಳಲ್ಲಿ ಇನ್ನು ಕೆಲವು ಸಮಸ್ಯೆಗಳನ್ನು ಸೃಷ್ಟಿಸಿ ಆ ಧರ್ಮವನ್ನು ಬದಲಾಯಿಸಬೇಕಾದ ಸನ್ನಿವೇಶಗಳು ಸೃಷ್ಟಿಯಾಗಬಹುದು. ಇಸ್ಲಾಮಿನ ವಿವಾಹ ವಿಚ್ಛೇದನ ವಿಷಯದಲ್ಲಿ ಮೂಗು ತೂರಿಸಿ ಅಲ್ಪಸಂಖ್ಯಾತರನ್ನು ಕೆರಳಿಸುವ ಪ್ರಯತ್ನಕ್ಕೆ ಯಾರೂ ಸಹಮತ ಸೂಚಿಸಬಾರದು ಎಂದು ಹೇಳಿದರು.

ದ.ಕ., ಉಡುಪಿ ಜಿಲ್ಲೆಗಳು ಸೇರಿದಂತೆ ಎಲ್ಲಾ ಸಮಾನಮನಸ್ಕ ಮುಸ್ಲಿಂ ಸಂಘಸಂಸ್ಥೆಗಳು ಮತ್ತು ಜಮಾಅತರ ಬೆಂಬಲದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹಮೀದ್ ಕಂದಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಜುಮಾನ್ ಖಾದಿಮುಲ್ ಮುಸ್ಲಿಮೀನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹಾಜಿ. ಜೆ. ಹಸನಬ್ಬ, ಉಪಾಧ್ಯಕ್ಷ ಹಾಜಿ ಆದಂ ಹುಸೈನ್, ಕಾರ್ಯದರ್ಶಿ ಎಚ್. ಇಸ್ಮಾಯೀಲ್, ಹಾಜಿ ಮಜೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News