×
Ad

ಕಡಬ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯಿಂದ ಧರಣಿ

Update: 2016-10-25 16:09 IST

ಕಡಬ, ಅ.25: ರಾಜ್ಯ ಸರಕಾರ ನಡೆಸಲುದ್ದೇಶಿಸಿರುವ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಹಿಂದೂ ವಿರೋಧಿಯಾದ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಹಿಂದೂ ದಮನ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರಕಾರವನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದರು. 

ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ, ಕಳೆದ ವರ್ಷ ಟಿಪ್ಪು ಜಯಂತಿಯನ್ನು ರಾಜ್ಯ ಸರಕಾರವು ಘೋಷಿಸಿದ ಸಂದರ್ಭದಲ್ಲಿ ಮಡಿಕೇರಿ ಸೇರಿದಂತೆ ರಾಜ್ಯದ ಹಲವೆಡೆ ದೊಂಬಿ, ಗಲಾಟೆಗಳು ನಡೆದಿದ್ದು, ಪ್ರಾಣಹಾನಿಯೂ ಸಂಭವಿಸಿತ್ತು. ಸರಕಾರವೇ ಗಲಭೆಗೆ ಪ್ರಚೋದನೆ ನೀಡುವಂತಿದೆ ಎಂದರು.

ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಸಮುದಾಯವನ್ನು ಕಾಂಗ್ರೆಸ್ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಒಡೆಯಲು ಪ್ರಯತ್ನಿಸುತ್ತಿದ್ದು, ಇದೀಗ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಹೊರಟಿದೆ. ಮುಂದಿನ ದಿನಗಳಲ್ಲಿ ಒಸಾಮಾ ಬಿನ್ ಲಾಡೆನ್ ಹಾಗೂ ದಾವೂದ್ ಇಬ್ರಾಹಿಂರಂತಹ ದೇಶದ್ರೋಹಿಗಳ ಜನ್ಮದಿನಾಚರಣೆಯನ್ನೂ ಆಚರಿಸಬಹುದೆಂದು ವ್ಯಂಗ್ಯವಾಡಿದರು.

ಈ ಕೊನೆಯ ಕ್ಷಣದಲ್ಲಿ ಸುಳ್ಯ ಶಾಸಕ ಎಸ್. ಅಂಗಾರ ಪ್ರತಿಭಟನೆಯಲ್ಲಿ ಸೇರಿಕೊಂಡರು. ಈ ಸಂದರ್ಭದಲ್ಲಿ ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ, ರವಿರಾಜ ಶೆಟ್ಟಿ, ಪ್ರಶಾಂತ್ ಪಂಜೋಡಿ, ಜಯರಾಂ ಆರ್ತಿಲ, ಅಶೋಕ್ ಕುಮಾರ್ ಪಿ, ಹರೀಶ್ ಉಂಡಿಲ ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News