ಕಿಡ್ನಿ ವೈಫಲ್ಯಕ್ಕೊಳಗಾದ ಬಾಲಕನಿಗೆ ನೆರವು
ಮೂಡುಬಿದಿರೆ, ಅ.25: ಶ್ರೀ ರಜಕ ಸಂಘ ಮುಂಬೈ ಇದರ ವತಿಯಿಂದ ಮೂಡುಬಿದಿರೆ ನಿವಾಸಿ ಪುನೀತ್ ಸಾಲಿಯಾನ್‌ರ ಕಿಡ್ನಿ ವೈಫಲ್ಯ ಚಿಕಿತ್ಸೆಗೆ ಆರ್ಥಿಕ ನೆರವನ್ನು ಬುಧವಾರ ನೀಡಲಾಯಿತು.
ಮೂಡುಬಿದಿರೆಯ ಸದಾನಂದ ಕುಂದರ್ ಹಾಗೂ ವನಜ ದಂಪತಿಯ ಪುತ್ರ ಪುನೀತ್ ಸಾಲಿಯನ್ (24) ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮಾಧ್ಯಮಗಳ ಮೂಲಕ ತಿಳಿದುಕೊಂಡ ಸಂಘದ ಸದಸ್ಯರು, ಮುಂಬೈ ರಜಕ ಬಾಂಧವರಿಂದ ಹಾಗೂ ದುಬೈನ ದಾನಿಗಳಿಂದ 3 ಲಕ್ಷ ರೂ. ಸಂಗ್ರಹಿಸಿದ್ದು, 2 ಲಕ್ಷ ರೂ.ಗಳನ್ನು ಪುನೀತ್ ಸಾಲಿಯನ್‌ರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ವಸಾಯಿ ವಿಭಾಗದ ಅಧ್ಯಕ್ಷ ರಮೇಶ್ ಪಲಿಮಾರ್, ಮಾಜಿ ಅಧ್ಯಕ್ಷ, ದಾನಿ ದೇವೇಂದ್ರ ಬುನ್ನಾನ್, ಸಕ್ರಿಯ ಕಾರ್ಯದರ್ಶಿ ವಸಂತ ಬುನ್ನಾನ್, ಕಾರ್ಯಕಾರಿ ಸಮಿತಿ ಸದಸ್ಯ ಶೇಖರ ಸಾಲ್ಯಾನ್, ಸದಸ್ಯ ರೂಪೇಶ್ ಪುತ್ರನ್ ಉಪಸ್ಥಿತರಿದ್ದರು.
ಇನ್ನುಳಿದ 1 ಲಕ್ಷ ರೂ. ಮೊತ್ತವನ್ನು ಉಳಿದ ಚಿಕಿತ್ಸೆಗೆ ಬಿಡುಗಡೆ ಮಾಡುವುದೆಂದು ರಜಕ ಸಂಘದ ಅಧ್ಯಕ್ಷ ಸತೀಶ್ ಸಾಲಿಯಾನ್ ಹಾಗೂ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.