×
Ad

ಉತ್ತರ ಕರ್ನಾಟಕದಲ್ಲಿ ಜನರ ಮನಗೆದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ

Update: 2016-10-25 17:30 IST

ಮೂಡುಬಿದಿರೆ, ಅ.25: ಆಳ್ವಾಸ್ ನುಡಿಸಿರಿ ಘಟಕದ ಮೂಲಕ ನಮ್ಮ ಸಂಸ್ಕೃತಿ, ಭಾಷೆ, ಸಂಸ್ಕಾರ ಮತ್ತು ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಳ್ವಾಸ್‌ನ ವಿದ್ಯಾರ್ಥಿ ಕಲಾವಿದರಿಂದ ಉತ್ತರ ಕರ್ನಾಟಕದ 9 ಕಡೆಗಳಲ್ಲಿ ಪ್ರದರ್ಶನಗೊಂಡಿರುವ ಆಳ್ವಾಸ್ ಸಾಂಸ್ಕೃತಿಕ ವೈಭವವು ದಾಖಲೆಯ ಎರಡೂವರೆ ಲಕ್ಷ ಜನರ ಮನ ಗೆದ್ದಿದೆ.

ಉತ್ತರ ಕರ್ನಾಟಕದ ನಿಪ್ಪಾಣಿ, ಜಮಖಂಡಿ, ಗೋಕಾಕ್, ಬೈಲಹೊಂಗಲ, ಬೀಳಗಿ, ಚಿಕ್ಕೋಡಿ, ಬೆಳಗಾವಿ, ಸವದತ್ತಿ ಮತ್ತು ಅಥಣಿ ಹೀಗೆ 9 ಕಡೆಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕವನ್ನು ಸ್ಥಾಪಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತಮ್ಮ ವಿದ್ಯಾರ್ಥಿ ಕಲಾವಿದರಿಂದ ಈ ಘಟಕಗಳಲ್ಲಿ ಸಾಂಸ್ಕೃತಿಕ ವೈವವನ್ನು ಏರ್ಪಡಿಸಿ ಅಲ್ಲಿನ ಜನರಲ್ಲಿ ಸಾಂಸ್ಕೃತಿಕವಾದ ಮತ್ತು ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸಗಳನ್ನು ಮಾಡಿದೆ. ಈ ನಿಟ್ಟಿನಲ್ಲಿ ಸವದತ್ತಿ ಮತ್ತು ಅಥಣಿಯಲ್ಲಿ ನಡೆದ ಎರಡೂ ಕಡೆಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸುಮಾರು 1,30,000ಕ್ಕೂ ಅಧಿಕ ಜನಸಂಖ್ಯೆಯಲ್ಲಿ ಕಲಾಸಕ್ತರು ಭಾಗವಹಿಸಿ ಕಲಾವಿದರನ್ನು ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500 ಮಂದಿ ವಿದ್ಯಾರ್ಥಿ ಕಲಾವಿದರು ಮೂರೂವರೆ ಗಂಟೆಗಳ ಕಾಲ 17 ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಮೋಹಿನಿಯಾಟಂ-ಕೇರಳ ನಟನಂ ಒಂದು ಗೂಡಿಸಿ ವಿಶೇಷ ರೀತಿಯಲ್ಲಿ ಪ್ರಸ್ತುತಗೊಳಿಸಲಾಗಿತ್ತು. ಆಂಧ್ರದ ಬಂಜಾರ ನೃತ್ಯ, ಮಧು ಮಾಸದ ರೂಪಕ, ಬಡಗುತಿಟ್ಟು ಯಕ್ಷ ಪ್ರಯೋಗ, ಮಣಿಪುರಿ ಸಾಹಸಮಯ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ನೃತ್ಯ ವೈಭವ, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಂ, ರೋಪ್ ಸಾಹಸದೊಂದಿಗೆ ಮಲ್ಲಕಂಬ, ಕಥಕ್-ಆನಂದ ಮಂಗಳಂ ದೇರ್, ಒರಿಸ್ಸಾದ ಗೋಟಿಪೂವ ಮತ್ತು ಯೋಗ ನೃತ್ಯ, ಗುಜರಾತ್‌ನ ಹುಡೋ ಮತ್ತು ರಾಸ, ತೆಂಕುತಿಟ್ಟು ಯಕ್ಷ ಪ್ರಯೋಗ ವೇದೋದ್ಧರಣ ಪಶ್ಚಿಮ ಬಂಗಾಳದ ಸಿಂಹ ನೃತ್ಯ ಪುರುಲಿಯೋ ಚಾವೋ ಹಾಗೂ ವಂದೇ ಮಾತರಂ ನೃತ್ಯಗಳು ಕಲಾಸಕ್ತರ ಮನಸೂರೆಗೊಂಡವು. ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿ ಕಲಾವಿದರಿಂದ ಪ್ರಸ್ತುತಗೊಂಡ ಸಾಹಸಮಯ ಒರಿಸ್ಸಾದ ಗೋಟಿಪೂವ ಮತ್ತು ಯೋಗ ನೃತ್ಯವು ಆಕರ್ಷಣೀಯ ಕೇಂದ್ರವಾಗಿತ್ತು. ಬುಡಕಟ್ಟು ಜನಾಂಗದ ಕಲೆಯಾಗಿರುವ ಈ ಜನಪದೀಯ ನೃತ್ಯವನ್ನು ಒರಿಸ್ಸಾದಲ್ಲಿ ಎಳೆಯ ಪ್ರಾಯದ ಹುಡುಗರು ಮಾತ್ರ ಮಾಡುತ್ತಾರೆ. ಭರತನಾಟ್ಯದ ವೇಷಭೂಷಣ ಹಾಕಿ ಹೆಜ್ಜೆಯನ್ನು ಹಾಕುವ ಈ ನೃತ್ಯದಲ್ಲಿ ವಿಷ್ಣುವಿನ ಹಾಡುಗಳನ್ನೇ ಬಳಸಲಾಗುತ್ತಿದೆ. ಜತೆಗೆ ಯೋಗವನ್ನೂ ಮಾಡಲಾಗುತ್ತದೆ.

ನಿಪ್ಪಾಣಿಯಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ ಘಟಕಗಳ ಸಾಂಸ್ಕೃತಿಕ ಯಾತ್ರೆಯು ವಿವಿಧ ಕಡೆಗಳಲ್ಲಿ 11 ದಿನಗಳ ಕಾಲ ನಡೆದಿದ್ದು ಅಥಣಿಯಲ್ಲಿ ಕೊನೆಗೊಂಡಿತು. 9 ಕಡೆಗಳಲ್ಲಿ ನಡೆದ ಈ ಸಾಂಸ್ಕೃತಿಕ ವೈವದ ವೇದಿಕೆಯ ಅಲಂಕಾರ, ಧ್ವನಿ ಬೆಳಕಿನ ವ್ಯವಸ್ಥೆಯನ್ನು ಆಳ್ವಾಸ್ ಸಂಸ್ಥೆಯೇ ನಿರ್ವಹಿಸಿದೆ. ಆಳ್ವಾಸ್‌ನ 15 ಮಂದಿ ಸಿಬ್ಬಂದಿ ಈ ಸಾಂಸ್ಕೃತಿಕ ವೈಭವದ ಯಶಸ್ಸಿಗೆ ಶ್ರಮಿಸಿದ್ದರು. ಅಥಣಿಯಲ್ಲಿ ನಡೆದ ಸಾಂಸ್ಕೃತಿಕ ವೈವಕ್ಕೂ ಮೊದಲು ಕ್ರೀಡಾಂಗಣದ ವರೆಗೆ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಕರಾವಳಿಯ ಕೊಂಬು, ಕಹಳೆ, ಶಂಖ, ಬೆಂಡೆ ತಾಳ, ಕೇರಳದ ಚೆಂಡೆ, ಡೊಳ್ಳಿನ ಕುಣಿತ ಗಮನ ಸೆಳೆದವು.

ಈ ಸಂದರ್ಭ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ನಮ್ಮ ದೇಶೀಯ ಕಲೆಗಳನ್ನು ಯುವ ಜನರ ಮನಸ್ಸಲ್ಲಿ ಬಿತ್ತಿದರೆ ಸಾಂಸ್ಕೃತಿಕ ರಂಗದಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ಕ್ರಿಯಾಶೀಲ, ಸೃಜನಶೀಲ ವೇದಿಕೆ ಕಲ್ಪಿಸುತ್ತಿದೆ. ಸಂಸ್ಥೆಯು ಪ್ರಯೋಗಶೀಲತೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ರೂಪು ನೀಡುತ್ತಿರುವ ತೃಪ್ತಿ ನನಗಿದೆ. ನುಡಿಸಿರಿ ಘಟಕಗಳ ಪದಾಧಿಕಾರಿಗಳ ಬೆಂಬಲ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ ಎಂದು ತಿಳಿಸಿದರು. ಇದೇ ಸಂದರ್ಭ ಮಾತನಾಡಿದ ಮಾಜಿ ಸಚಿವ, ಅಥಣಿ ಶಾಸಕ ಲಕ್ಷ್ಮಣ್ ಸವದಿ, ಶಿಕ್ಷಣವನ್ನು ವ್ಯಾಪಾರಕ್ಕೆ ಬಳಸದೆ, ವಿದ್ಯಾರ್ಥಿಗಳಲ್ಲಿರುವ ನೈಜ ಪ್ರತಿಬೆಅರಳಿಸಲು ಮೂಡುಬಿದಿರೆಯ ಮೋಹನ ಆಳ್ವರು ಒಂದೇ ಕಡೆ ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿರುವುದು ಮಾದರಿ ಕೆಲಸ. ಮುಂದಿನ ವರ್ಷ ಅಥಣಿ ಗಡಿನಾಡ ಉತ್ಸವದಲ್ಲೂ ಆಳ್ವಾಸ್ ತಂಡ ಕಾರ್ಯಕ್ರಮ ನೀಡಬೇಕೆಂದು ವಿನಂತಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News