ಅಕ್ಕಿಕಾಳಿನಲ್ಲೂ ದಾಖಲೆ ಸೃಷ್ಟಿಸುವ ವಿಶೇಷ ಕಲಾವಿದರಿವರು!
ಮಂಗಳೂರು, ಅ.25: ಅಕ್ಕಿ ಕಾಳಿನಲ್ಲಿ ಬರೆಯುವ ಪುರಾತನ ಕಲೆಯನ್ನು ಸಿದ್ದಿಸಿಕೊಂಡಿರುವ ಅಕ್ಕಿಕಾಳು ವೆಂಕಟೇಶ್ ಅವರು ನ. 12 ರಂದು ನಗರದ ಫೋರಂ ಫಿಝಾ ಮಾಲ್‌ನಲ್ಲಿ ಸುಮಾರು 10,000 ಜನರ ಸಮಕ್ಷಮದಲ್ಲಿ ಅಕ್ಕಿ ಕಾಳಿನಲ್ಲಿ ಬರೆಯುವ ಕಾರ್ಯಾಗಾರ ನಡೆಸುವ ಮೂಲಕ ತಮ್ಮದೇ ಹಳೆಯ ದಾಖಲೆಯನ್ನು ಮುರಿಯಲು ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ವೆಂಕಟೇಶ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ಸಂಸ್ಥೆಗಳ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಈ ಕಾರ್ಯಕ್ರಮ ದಾಖಲಾಗಲಿದೆ ಎಂದು ಹೇಳಿದರು.
ಸುಮಾರು 2200 ವರ್ಷಗಳ ಇತಿಹಾಸ ಹೊಂದಿರುವ ಈ ಕಲಾ ಬರವಣಿಗೆಯನ್ನು ಹಿಂದಿನ ಕಾಲದಲ್ಲಿ ರಹಸ್ಯ ಸಂದೇಶ ಕಳುಹಿಸಲು ಬಳಸಲಾಗುತ್ತಿತ್ತು. ಪುರಾತನ ಮೈಕ್ರೋ ಆರ್ಟ್‌ಗೆ ಪುನಶ್ಚೇತನ ನೀಡುವುದು ಹಾಗೂ ಅದರ ಶೈಕ್ಷಣಿಕ ವೌಲ್ಯಗಳನ್ನು ತಿಳಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶ. ಮಕ್ಕಳ ದಿನಾಚರಣೆ ಸಂದರ್ಭ ಸಂಘಟಿಸಲಾಗುವ ಈ ಕಾರ್ಯಕ್ರಮದ ಪ್ರಯೋಜನವನ್ನು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಇಚ್ಚೆ ಎಂದವರು ನುಡಿದರು.
ಈಗಾಗಲೇ ಈ ರಿತಿ ವಿಶ್ವ ದಾಖಲೆ ನಿರ್ಮಿಸಿರುವ ವಿಶ್ವ ವಿಖ್ಯಾತಿಯ ಅಕ್ಕಿಕಾಳು ವೆಂಕಟೇಶ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಬೃಹತ್ ಎಲ್‌ಇಡಿ ಟಿವಿ ಪರದೆಯ ಮೂಲಕ ಪ್ರಾತ್ಯಕ್ಷಿಕೆ ನೀಡಿ ಈ ಮೈಕ್ರೋ ಆರ್ಟ್‌ನ ಕೌಶಲ ತಿಳಿಸಿ ಕೊಡಲಾಗುವುದು. ನಾಲ್ಕು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಯಾವುದೇ ಕಲಾ ನೈಪುಣ್ಯತೆ ವಶ್ಯಕತೆ ಇರುವುದಿಲ್ಲ. ಭಾಗವಹಿಸಿದ ಎಲ್ಲಾ ಪ್ರತಿನಿಧಿಗಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಅಧಿಕೃತ ಪ್ರಮಾಣಪತ್ರ ನೀಡಲಾಗುವುದು ಎಂದು ಸಂಘಟಕಿ ದೀಪ್ತಿ ತಿಳಿಸಿದರು.
ಕಾರ್ಯಕ್ರಮದ ರಾಯಭಾರಿ ಚಲನಚಿತ್ರ ನಟ ಅವಿನಾಶ್ ಶೆಟ್ಟಿ, ತುಷಾರ್ ಉಪಸ್ಥಿತರಿದ್ದರು.