ದೂರು ಬಾರದಂತೆ ತ್ಯಾಜ್ಯ ವಿಲೇವಾರಿ ಮಾಡಿ: ಗುತ್ತಿಗೆದಾರರಿಗೆ ಖಡಕ್ ಸೂಚನೆ

Update: 2016-10-25 12:46 GMT

ಬಂಟ್ವಾಳ, ಅ. 25: ಮುಂದಿನ ಡಿಸೆಂಬರ್ ತಿಂಗಳ ತನಕದ ಎರಡು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರು ಬಾರದಂತೆ ಉತ್ತಮ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಿಸುವಂತೆ ಯೋಜನಾ ನಿರ್ದೇಶಕ ಪ್ರಸನ್ನ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಪುರಸಭಾ ವ್ಯಾಪ್ತಿಯ ಅಸಮರ್ಪಕ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪುರಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಸಮರ್ಪಕ ಘನತ್ಯಾಜ್ಯ ವಿಲೇವಾರಿ ಕುರಿತಂತೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಜನವರಿಯಿಂದ ಘನತ್ಯಾಜ್ಯ ವಿಲೇವಾರಿಯ ಗುತ್ತಿಗೆ ಪಡೆದ ಬಳಿಕ ಗುತ್ತಿಗೆದಾರ ಎಮ್ಮೆಕೆರೆ ಸಲಾಂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ನಡೆಸದ ಹಿನ್ನೆಲೆಯಲ್ಲಿ ಪ್ರತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ತಾರ್ಕಿಕ ಅಂತ್ಯ ಕಾಣದೆ ಇರುವುದರಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಯೋಜನಾ ನಿರ್ದೇಶಕರು ಈ ಸಭೆ ನಡೆಸಿದರು.

ಸದಸ್ಯರು, ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆದ ಯೋಜನಾ ನಿರ್ದೇಶಕ ಪ್ರಸನ್ನ, ಟೆಂಡರ್ ಅನ್ವಯ ಗುತ್ತಿಗೆದಾರ ಕಾರ್ಯನಿರ್ವಹಿಸಿಲ್ಲ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಾಕಿ ಇರುವ ಎರಡು ತಿಂಗಳ ಅವಧಿಯಲ್ಲಿ ಶೇ.100ರಷ್ಟು ಮನೆ ಮನೆಯಿಂದ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಆಗುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಅವರು ಸೂಚಿಸಿದರು.

’ಎ’ ಗ್ರೇಡ್ ಒಳಗೊಂಡ 14 ಕಿ.ಮೀಟರ್ ರಸ್ತೆ ಇರುವ ನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯವೂ ಸ್ವಚ್ಛತೆ ಮಾಡಬೇಕು. ಉಳಿದಂತೆ ‘ಬಿ’ ಮತ್ತು ’ಸಿ’ ಗ್ರೇಡ್ ರಸ್ತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಎರಡು ದಿನಗಳಲ್ಲಿ ಒಮ್ಮೆಯಾದರೂ ಸ್ವಚ್ಛತೆಗೊಳಿಸಬೇಕು ಎಂದ ಅವರು, ಮೂಲದಲ್ಲೇ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಹಸಿ ಕಸವನ್ನು ಪ್ರತೀ ದಿನ ಹಾಗೂ ಒಣ ಕಸವನ್ನು ವಾರಕ್ಕೊಂದು ಬಾರಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಪುರಸಭೆಯಿಂದ ನಡೆಯಬೇಕು ಎಂದು ಸಲಹೆ ನೀಡಿದರು.

ಟೆಂಡರ್ ಅನ್ವಯ ನಿಗದಿತ ಕಾರ್ಮಿಕರನ್ನು ಬಳಸದಿರುವುದು, ಅವರಿಗೆ ಪಿಎಫ್, ಆರೋಗ್ಯ ಸೌಲಭ್ಯ ನೀಡದಿರುವುದು ಹಾಗೂ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿಯಾಗದ ಬಗ್ಗೆ ವರದಿ ತಯಾರಿಸಿ ಗುತ್ತಿಗೆದಾರನಿಂದ ದಂಡ ವಸೂಲಿ ಮಾಡುವಂತೆ ಆರೋಗ್ಯಾಧಿಕಾರಿ ಪ್ರಸಾದ್‌ಗೆ ಯೋಜನಾ ನಿರ್ದೇಶಕರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ಸದಸ್ಯರಾದ ವಾಸು ಪೂಜಾರಿ, ಗಂಗಾದರ, ಜಗದೀಶ್ ಕುಂದರ್, ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಮುಹಮ್ಮದ್ ಇಕ್ಬಾಲ್ ಐ.ಎಂ.ಆರ್., ಶರೀಫ್, ಯಾಸ್ಮೀನ್, ಮುಮ್ತಾಖ್ ಬಾನು, ವಸಂತಿ ಚಂದಪ್ಪ, ಚಂಚಲಾಕ್ಷಿ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಭಟ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News