ಯಕ್ಷಗಾನ ಕರ್ನಾಟಕದ ಬಯಲು ವಿಶ್ವವಿದ್ಯಾನಿಲಯ: ಡಾ.ಭಾಸ್ಕರಾನಂದ ಕುಮಾರ್
ಉಡುಪಿ, ಅ.25: ನಮ್ಮನ್ನು ಅಲೌಕಿಕ ಲೋಕಕ್ಕೆ ಕೊಂಡೊಯ್ಯುವ ವೇಷಭೂಷಣ, ಜೀವನೋಲ್ಲಾಸವನ್ನು ತುಂಬುವ ವೈವಿಧ್ಯಮಯ ನೃತ್ಯ, ರಸ ಭಾವಾಭಿವ್ಯಂಜಕವಾದ ಭಾಗವತಿಕೆ, ಚೆಂಡೆ-ಮದ್ದಳೆ, ಆಶು ವೈಭವದ ಸಂಭಾಷಣಾ ಚಾತುರ್ಯಗಳಿಂದ ಸಂಪನ್ನವಾದ ಯಕ್ಷಗಾನ ಕರ್ನಾಟಕದ ಬಯಲು ವಿದ್ಯಾನಿಲಯವೇ ಆಗಿದೆ ಎಂದು ಖ್ಯಾತ ವೈದ್ಯ, ಯಕ್ಷಗಾನ ಕಲಾವಿದ ಡಾ.ಭಾಸ್ಕರಾನಂದ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ನೆರವಿನೊಂದಿಗೆ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಐದು ತಿಂಗಳು ನಡೆದ ಯಕ್ಷಗಾನ ವಿಶೇಷ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
‘ಔಪಚಾರಿಕ ಶಿಕ್ಷಣದೊಂದಿಗೆ ಯಕ್ಷಗಾನ ಶಿಕ್ಷಣವನ್ನೂ ನಮ್ಮ ವಿದ್ಯಾರ್ಥಿಗಳಿಗೆ ನೀಡಿದರೆ ಹೆಚ್ಚಿನ ಸಂಸ್ಕಾರ ಸಿಗುತ್ತದೆ. ಇಂತಹ ಸಂಸ್ಕಾರ ನೀಡುವುದಕ್ಕೆ ಉತ್ತಮ ಪ್ರಸಂಗ ಸಾಹಿತ್ಯವೂ ಬೇಕು ಎಂದವರು ಹೇಳಿದರು.
‘ಯಕ್ಷವಿಜಯ’ ಕೃತಿಯನ್ನು ಲೋಕಾರ್ಪಣೆ ಮಾಡಿದ ಮಣಿಪಾಲ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಮಾತನಾಡಿ, ಯಕ್ಷಗಾನದ ಪ್ರೇಕ್ಷಕರು ಹೊಸ ಪ್ರಸಂಗ ಬಯಸುತ್ತಿದ್ದಾರೆ. ಪ್ರಸಂಗ ಹೊಸತಾದರೆ ಸಾಲದು. ಅದು ನಮ್ಮ ಸಂಸ್ಕಾರಕ್ಕೂ ಕಾರಣವಾಗಬೇಕು. ಯಕ್ಷವಿಜಯ ಉಪನಿಷತ್ತಿನ ರೋಚಕ ಕತೆಯಾಗಿದೆ ಎಂದು ಶುಭಹಾರೈಸಿದರು.
ಯಕ್ಷಗಾನ ಬಯಲಾಟ ಅಕಾಡಮಿಯ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡಮಿ ಸದಸ್ಯ ಪಿ.ಕಿಶನ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ಕಲಾಪೋಷಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹಾಗೂ ಡಾ.ಪಿ.ಎಲ್.ಎನ್. ರಾಯರು ಉಪಸ್ಥಿತರಿದ್ದರು. ಅಂಬಾತನಯ ಮುದ್ರಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರ ಮಾರ್ಗದರ್ಶನ ದಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕೃಷ್ಣಮೂರ್ತಿ ಭಟ್ ತರಬೇತಿ ನೀಡಿದ್ದರು. ಕೊನೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ‘ಜಾಂಬವತಿ ಕಲ್ಯಾಣ’ ಪ್ರದರ್ಶನ ನಡೆಯಿತು.