ಇಂಟರ್‌ಸಿಟಿ ರೈಲಿನ ವಿಸ್ತರಣೆಗೆ ರೈಲ್ವೆ ಯಾತ್ರಿ ಸಂಘ ಮನವಿ
ಉಡುಪಿ, ಅ.25: ಮಂಗಳೂರು ಹಾಗೂ ಮಡಂಗಾವ್ ನಡುವೆ ಸಂಚರಿಸುವ ಇಂಟರ್‌ಸಿಟಿ ರೈಲನ್ನು ಕೇರಳದ ಕಣ್ಣೂರಿನಿಂದ ಗೋವಾದ ವಾಸ್ಕೋಡಗಾಮದವರೆಗೆ ವಿಸ್ತರಿಸುವಂತೆ ಉಡುಪಿ ರೈಲ್ವೆ ಯಾತ್ರಿ ಸಂಘವು ಕಣ್ಣೂರಿನ ಸಂಸದೆ ಚೀಟರ್ ಪಿ.ಕೆ. ಇವರಿಗೆ ಮನವಿ ಮಾಡಿ ಒತ್ತಾಯಿಸಿದೆ.
ವಿವಿಧ ಕಾರಣಗಳಿಗಾಗಿ ಖಾಲಿಯಾಗಿ ಓಡುತ್ತಿರುವ ಇಂಟರ್‌ಸಿಟಿ ರೈಲನ್ನು ರದ್ದು ಮಾಡುವ ಹುನ್ನಾರವನ್ನು ಸದರ್ನ್ ರೈಲ್ವೆ ನಡೆಸುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಣ್ಣೂರಿಗೆ ತೆರಳಿದ ಸಂಘದ ಪದಾಧಿಕಾರಿಗಳು ಈ ರೈಲನ್ನು ಕೇರಳದ ಕಣ್ಣೂರಿನಿಂದ ಪ್ರಾರಂಭಿಸಿ ವಾಸ್ಕೋಡಗಾಮದವರೆಗೆ ವಿಸ್ತರಿಸ ಬೇಕೆಂಬ ಮನವಿ ಸಲ್ಲಿಸಿದೆ ಎಂದು ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2014ರ ಫೆ.23ರಂದು ಮಂಗಳೂರು-ಮಡಂಗಾವ್ ಇಂಟರ್‌ಸಿಟಿ ಹಾಗೂ ಭಟ್ಕಳ-ಮಂಗಳೂರು ಡೆಮು ರೈಲು ಪ್ರಾರಂಭಗೊಂಡಿದ್ದು, ಈ ಎರಡೂ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ರೈಲ್ವೆ ಯಾತ್ರಿ ಸಂಘ ಕೊಂಕಣ ರೈಲ್ವೆಯ ರೀಜನಲ್ ಮ್ಯಾನೇಜರ್‌ರನ್ನು 2014ರ ಮಾ.ತಿಂಗಳಲ್ಲಿ ಭೇಟಿಯಾಗಿ ಡೆಮು ರೈಲನ್ನು ಮಡಂಗಾವ್‌ವರೆಗೆ ವಿಸ್ತರಿಸಲು ಮನವಿ ಮಾಡಿತ್ತು.
ಅದರಂತೆ ಅದೇ ಜು.1ರಿಂದ ಡೆಮು ರೈಲನ್ನು ಮಡಂಗಾವ್‌ಗೆ ವಿಸ್ತರಿಸಿದ್ದು, ಅದೀಗ ಪ್ರಯಾಣಿಕರಿಂದ ತುಂಬಿ ಓಡುತ್ತಿದೆ. ಆದರೆ ಇಂಟರ್‌ಸಿಟಿ ರೈಲು ಈಗಲೂ ಖಾಲಿಯಾಗಿ ಓಡುತಿದ್ದು, ಇದರ ಸುಧಾರಣೆಗೆ ಸಂಘ ಮಾಡಿದ ಯಾವುದೇ ಮನವಿಗೂ ಸದರ್ನ್ ರೈಲ್ವೆ ಸ್ಪಂದಿಸಿಲ್ಲ ಎಂದವರು ಹೇಳಿದ್ದಾರೆ.
ಇಂಟರ್‌ಸಿಟಿ ಮಂಗಳೂರಿನ್ನು (ಬೆಳಗ್ಗೆ 8:15) ಬಿಡುವ ವೇಳೆಗೆ ಮೂರು ರೈಲು ಮಡಂಗಾವ್‌ಗೆ ತೆರಳುತ್ತವೆ. ಮಂಗಳೂರು-ಮಡಂಗಾವ್ ನಡುವೆ 28 ನಿಲ್ದಾಣಗಳಿದ್ದು, ಇದು ಕೇವಲ 8ರಲ್ಲಿ ಮಾತ್ರ ನಿಲ್ಲುತ್ತದೆ. ಅಲ್ಲದೇ ಇದರ ಟಿಕೇಟ್ ದರವೂ ಹೆಚ್ಚಾಗಿದೆ. ಇದರಿಂದ ಇಂಟರ್‌ಸಿಟಿ ಖಾಲಿಯಾಗಿ ಓಡುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ರೈಲನ್ನು ವಿಸ್ತರಿಸಲು ಮಾಡಿದ ಮನವಿಗೆ ಸಂಸದೆ ಟೀಚರ್ ಪಿ.ಕೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ದಕ್ಷಿಣ ರೈಲ್ವೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಡಯಾಸ್ ತಿಳಿಸಿದರು.
ನಿಯೋಗದಲ್ಲಿ ಡಯಾಸ್‌ರೊಂದಿಗೆ ಕಾರ್ಯದರ್ಶಿ ಪ್ರಭಾಕರ ಆಚಾರ್, ನಿರ್ದೇಶಕ ಜಾನ್ ರೆಬೆಲ್ಲೊ ಇದ್ದರು.