×
Ad

ಕ್ಯಾಂಟ್ ಚಂಡಮಾರುತವಾಗಿ ರೂಪುಗೊಂಡ ಬಂಗಾಳಕೊಲ್ಲಿಯ ವಾಯುಭಾರ ಕುಸಿತ

Update: 2016-10-25 19:45 IST

ಹೊಸದಿಲ್ಲಿ, ಅ.25: ಬಂಗಾಳಕೊಲ್ಲಿಯಲ್ಲಿಂದು ವಾಯುಭಾರ ಕುಸಿತವು ಇನ್ನಷ್ಟು ತೀವ್ರಗೊಂಡು ‘ಕ್ಯಾಂಟ್’ ಚಂಡಮಾರುತವಾಗಿ ರೂಪುಗೊಂಡಿದೆಯೆಂದು ಭಾರತೀಯ ಹವಾಮಾನ ಇಲಾಖೆ ಇಂದು ವರದಿ ಮಾಡಿದೆ.

ಬಂಗಾಳಕೊಲ್ಲಿಯ ಪೂರ್ವ-ಮಧ್ಯದಲ್ಲಿದ್ದ ವಾಯುಭಾರ ಕುಸಿತವು ಪಶ್ಚಿಮ-ವಾಯವ್ಯದತ್ತ ಮುಂದುವರಿದಿದೆ ಹಾಗೂ ‘ಕ್ಯಾಂಟ್’ ಚಂಡಮಾರುತವಾಗಿ ತೀವ್ರತೆ ಪಡೆದಿದೆ. ಅದು ಪೋರ್ಟ್‌ಬ್ಲೇರ್‌ನ 620 ಕಿ.ಮೀ. ಪಶ್ಚಿಮ-ವಾಯವ್ಯ, ಗೋಪಾಲ್ಪುರದಿಂದ 710 ಕಿ.ಮೀ. ದಕ್ಷಿಣ-ಆಗ್ನೇಯ ಹಾಗೂ ವಿಶಾಖಪಟ್ಟಣದಿಂದ 850 ಕಿ.ಮೀ. ಪೂರ್ವದಲ್ಲಿ ಅದು ಕೇಂದ್ರೀಕರಿಸಲ್ಪಟ್ಟಿದೆ.

ಈ ವ್ಯವಸ್ಥೆ ಮೊದಲು ಪಶ್ಚಿಮ-ವಾಯವ್ಯದ ಕಡೆ ಹಾಗೂ ಬಳಿಕ ಪಶ್ಚಿಮ-ನೈಋತ್ಯದ ಕಡೆ ಚಲಿಸಿ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯತ್ತ ಮುಂದಿನ 72 ತಾಸುಗಳಲ್ಲಿ ಚಲಿಸಲಿದೆಯೆಂದು ಐಎಂಡಿಯ ಚಂಡ ಮಾರುತ ಮುನ್ನೆಚ್ಚರಿಕೆ ವಿಭಾಗ ತಿಳಿಸಿದೆ.

ಆದಾಗ್ಯೂ, ಕ್ಯಾಂಟ್ ತೀರಕ್ಕೆ ಅಪ್ಪಳಿಸದಿರುವ ಸಾಧ್ಯತೆಯಿದೆಯೆಂದು ಅದು ಹೇಳಿದೆ.

ಅ.27ರಿಂದ ಒಡಿಶಾ ಕರಾವಳಿ ಹಾಗೂ ಆಂಧ್ರಪ್ರದೇಶದ ಉತ್ತರ ತೀರದಲ್ಲಿ ತಾಸಿಗೆ 45-55 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಈ ಕರಾವಳಿಗಳಲ್ಲಿ ಕಡಲಿಗಿಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News