×
Ad

ಬೈಕ್-ಸ್ಕೂಟರ್ ಮಧ್ಯೆ ಢಿಕ್ಕಿ: ಓರ್ವ ಮೃತ್ಯು

Update: 2016-10-25 21:17 IST

ಮುಲ್ಕಿ, ಅ.25: ಕಿನ್ನಿಗೋಳಿ ಸಮೀಪದ ಗೋಳಿಜೋರ ಶಿಮಂತೂರು ಶಾಲೆ-ಪಂಜಿನಡ್ಕ ರಸ್ತೆಯಲ್ಲಿ ಬೈಕ್ ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಮಂಗಳವಾರ  ನಡೆದಿದೆ.

ಮೃತಪಟ್ಟವರನ್ನು ಅಂಗರಗುಡ್ಡೆ ನಿವಾಸಿ ಇಲಿಯಾಸ್ (42) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶಿಮಂತೂರು ಮಜಲಗುತ್ತು ನಿವಾಸಿ ರಕ್ಷಿತ್ ಶೆಟ್ಟಿ (30)ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ ಮೂಡುಬಿದಿರೆಯ ಸಂಬಂಧಿಕರ ಮನೆಯಿಂದ ಅಂಗರಗುಡ್ಡೆಗೆ ಬರುತ್ತಿದ್ದ ಇಲಿಯಾಸ್ ಎಂಬವರ ಸ್ಕೂಟರ್ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಉದ್ಯೋಗಕ್ಕೆ ತೆರಳುತ್ತಿದ್ದ ರಕ್ಷಿತ್ ಶೆಟ್ಟಿಯವರ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು, ಗಂಭಿರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಪಘಾತದ ಸಂದರ್ಭ ಭೀಕರ ಸದ್ದು ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯ ಮನೆಯವರು ಧಾವಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡಿದ್ದ ಇಲಿಯಾಸ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಇಲಿಯಾಸ್ ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಬೈಕ್ ಸವಾರ ರಕ್ಷಿತ್ ಶೆಟ್ಟಿ ಎಂಬವರ ಕಣ್ಣು ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೇಲ್ವಿಚಾರಕ ವಿಭಾಗದಲ್ಲಿ ಮೆಕ್ಯಾನಿಕ್ ಆಗಿದ್ದ ಅವರು, ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. 

ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News