ಗುಮ್ನಾಮಿ ಬಾಬಾ ಜೊತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಏನು ನಂಟು ?
ಲಕ್ನೋ, ಅ.26: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರೇ ಗುಮ್ನಾಮಿ ಬಾಬಾ ಆಗಿದ್ದಿರಬಹುದೆಂಬ ಹಲವಾರು ಊಹಾಪೋಹಗಳು ಹಾಗೂ ಗುಮ್ನಾಮಿ ಬಾಬಾ ಅವರ ಸುತ್ತ ಹರಡಿಕೊಂಡಿದ್ದ ರಹಸ್ಯ ಮಂಗಳವಾರ ಕುತೂಹಲಕಾರಿ ತಿರುವು ತೆಗೆದುಕೊಂಡಿತು. ಸಹಾಯ್ ಆಯೋಗ ಫೈಝಾಬಾದ್ ನಗರದಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಗುಮ್ನಾಮಿ ಬಾಬಾ ಅವರೊಂದಿಗೆ ಸಂಪರ್ಕದಲ್ಲಿದ್ದರೆಂದು ಹೇಳಲಾದ ರವೀಂದ್ರ ಶುಕ್ಲಾ(57) ತಮ್ಮ ಹೇಳಿಕೆ ದಾಖಲಿಸುತ್ತಾ 1980ರ ದಶಕದಲ್ಲಿ ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂದಿನ ಕಾಂಗ್ರೆಸ್ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಸಂದರ್ಭ ಒಮ್ಮೆ ಅಕ್ಟೋಬರ್ ತಿಂಗಳಲ್ಲಿ ನವರಾತ್ರಿ ಗುಮ್ನಾಮಿ ಬಾಬಾ ಅವರನ್ನು ಭೇಟಿಯಾಗಿದ್ದರು ಎಂಬ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಗುಮ್ನಾಮಿ ಬಾಬಾ ಅವರ ಅಂತ್ಯಕ್ರಿಯೆ ಗುಪ್ತಾರ್ ಘಾಟ್ ನಲ್ಲಿ ನಡೆದಾಗ ಅದಕ್ಕೆ ಸಾಕ್ಷಿಯಾಗಿದ್ದ 13 ಜನರಲ್ಲಿ ಶುಕ್ಲಾ ಒಬ್ಬರಾಗಿದ್ದಾರೆ.
1981-82ರಲ್ಲಿ ಒಮ್ಮೆ ಭಗವಾನ್ ಜೀ ತಮಗೆ ಬಂಗಾಳಿ ವ್ಯಕ್ತಿಯೊಬ್ಬರೊಂದಿಗೆ ಸ್ಥಳೀಯ ಮಾರುಕಟ್ಟೆಗೆ ಹೋಗುವಂತೆ ನಿರ್ದೇಶಿಸಿದ್ದರು. ಆ ವ್ಯಕ್ತಿ ಅಯ್ಯೋಧ್ಯೆಯ ಬಿರ್ಲಾ ಧರಮ್ ಶಾಲಾದಲ್ಲಿ ವಾಸಿಸುತ್ತಿದ್ದರು. ಅವರನ್ನು ನನ್ನ ಯಝ್ಡೀ ಮೋಟಾರ್ ಸೈಕಲ್ಲಿನಲ್ಲಿ ಫೈಝಾಬಾದಿನ ಚೌಕ್ ಪ್ರದೇಶಕ್ಕೆ ಕರೆದೊಯ್ದಿದ್ದಿದ್ದೆ. ಅಲ್ಲಿ ಅವರು ಬಟ್ಟೆಗಳು ಹಾಗೂ ಒಣಹಣ್ಣುಗಳನ್ನು ಅಲ್ಲಿನ ಪ್ರಮುಖ ಮಳಿಗೆಯೊಂದರಲ್ಲಿ ಖರೀದಿಸಿದ್ದರು. ಆ ವ್ಯಕ್ತಿಯನ್ನು ನಂತರ ನಾನು ಬಿರ್ಲಾ ಧರಮ್ ಶಾಲದಲ್ಲಿ ಬಿಟ್ಟು ಬಂದೆ. ಆ ವ್ಯಕ್ತಿಯೊಂದಿಗೆ ನಾನು ಬಹಳಷ್ಟು ಹೊತ್ತು ಇದ್ದುದರಿಂದ ಅವರ ಮುಖಚರ್ಯೆ ನನಗೆ ನೆನಪಿದೆ. ಮುಂದೆ ಅವರು ಕೇಂದ್ರ ಸಚಿವರಾಗಿ ನಂತರ ರಾಷ್ಟ್ರಪತಿಯಾದಾಗ ನಾನು ಅಂದು ಮಾರುಕಟ್ಟೆಗೆ ಕರೆದುಕೊಂಡು ಹೋದ ವ್ಯಕ್ತಿ ಪ್ರಣಬ್ ಮುಖರ್ಜಿಯಾಗಿದ್ದರು ಎಂದು ತಿಳಿದುಕೊಂಡೆ’’ ಎಂದು ಆಯೋಗದ ಮುಂದೆ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಭಗವಾನ್ ಜೀಯವರ ಜೀವಿತಾವಧಿಯಲ್ಲಿ ಅವರನ್ನು ನೋಡುವ ಅವಕಾಶ ನನಗಿರಲಿಲ್ಲ. ಆದರೆ ಅವರಿಂದ ಆಶೀರ್ವಾದ ಪಡೆದಿದ್ದೆ. ಅವರ ಕಾಲುಗಳನ್ನು ಮುಟ್ಟಿದ್ದೆ ಹಾಗೂ ಅವರ ಕೋಣೆಯ ಕೂಲರನ್ನು ಕೂಡ ದುರಸ್ತಿಗೊಳಿಸಿದ್ದೆ. ಅವರು ಪ್ರಾಣ ತ್ಯಜಿಸಿದ ನಂತರವಷ್ಟೇ ನಾನು ಮೊದಲ ಬಾರಿ ಅವರನ್ನು ನೋಡಿದ್ದೆ ಹಾಗೂ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರನ್ನು ಹೋಲುತ್ತಿದ್ದರು’’ ಎಂದು ಶುಕ್ಲಾ ಹೇಳಿದ್ದಾರೆ.