ಅಕ್ರಮ ಮರಳು ಅಡ್ಡೆಗೆ ದಾಳಿ: ಪೊಲೀಸರನ್ನು ನೋಡಿ ನದಿಗೆ ಹಾರಿದ ಕಾರ್ಮಿಕ ಮೃತ್ಯು

Update: 2016-10-26 15:34 GMT

ಬಂಟ್ವಾಳ, ಅ. 26: ತಾಲೂಕಿನ ಅರಳ ಗ್ರಾಮದ ಮುಲ್ಲರಪಟ್ಣದ ಮಾರ್ಗದಂಗಡಿ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ದಾಳಿ ನಡೆಸಿದ ವೇಳೆ ಪೊಲೀಸರಿಂದ ತಪ್ಪಿಸಲೆಂದು ನದಿಗೆ ಹಾರಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಇನ್ನೋರ್ವ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.

ಸ್ಥಳೀಯ ಮುತ್ತೂರು ನಿವಾಸಿ ದಿ.ಎಂ.ಹಸನಬ್ಬ ಎಂಬವರ ಪುತ್ರ ಶರೀಫ್ (30) ಮೃತ ಯುವಕ. ಮುತ್ತೂರು ನಿವಾಸಿ ಝೈನುದ್ದೀನ್ ಎಂಬವರು ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ನಿರ್ದೇಶನದಂತೆ ಬಂಟ್ವಾಳ ಸಿಐ ಬಿ.ಕೆ.ಮಂಜಯ್ಯರ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಎಸ್ಸೈ ರಕ್ಷಿತ್ ಮತ್ತವರ ತಂಡ ಈ ದಾಳಿ ಕಾರ್ಯಾಚರಣೆಯನ್ನು ನಡೆಸಿದೆ. ಪೊಲೀಸರು ಸ್ಥಳಕ್ಕೆ ದಾಳಿ ನಡೆಸುತ್ತಿದ್ದಂತೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ದಿಕ್ಕು ಪಾಲಾಗಿ ಓಡಲಾರಂಭಿಸಿದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಶರೀಫ್, ಝೈನುದ್ದೀನ್ ಸಹಿತ ನಾಲ್ವರು ಕಾರ್ಮಿಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಇಳಿದಿದ್ದು ಇವರ ಪೈಕಿ ಇಬ್ಬರು ಈಜಿ ಮತ್ತೊಂದು ದಡ ಸೇರಿದರೆ, ಶರೀಫ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಝೈನುದ್ದೀನ್ ಈಜಲಾರದೆ ಅಸ್ವಸ್ಥಗೊಂಡು ಅರ್ಧದಿಂದಲೇ ವಾಪಸ್ ಬಂದಿದ್ದು ಇವರನ್ನು ತುಂಬೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಘಟನೆ ಪರಿಸರದಲ್ಲಿ ಕಾಡ್ಗಿಚ್ಚಿನಂತೆ ಹರಡಿದ ಪರಿಣಾಮ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಇದೇ ವೇಳೆ ಉದ್ರಿಕ್ತರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು ಪರಿಣಾಮ ಪೊಲೀಸರ ಜೀಪೊಂದು ಹಾನಿಗೊಂಡಿದೆ. ಘಟನೆಯ ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮುಂಜಾಗ್ರತ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು.

ಈ ನಡುವೆ ನೀರಿನಲ್ಲಿ ಮುಳುಗಿ ಮೃತಪಟ್ಟ ಶರೀಫ್‌ಗಾಗಿ ಬಂಟ್ವಾಳ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಶೋಧ ಕಾರ್ಯ ನಡೆಸಿ ತೂಗು ಸೇತುವೆಯ ಅಡಿಭಾಗದಿಂದ ಮೃತ ದೇಹವನ್ನು ಮೇಲೆಕೆತ್ತುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಸ್ಥಳದಲ್ಲಿ ಸೇರಿದ್ದ ಉದ್ರಿಕ್ತ ಜನರು ಸ್ಥಳಕ್ಕೆ ಜಿಲ್ಲಾಧಿಕಾರಿ ಬಾರದೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ತೆಗೆದು ಹೋಗದಂತೆ ಪಟ್ಟು ಹಿಡಿದರು. ಈ ಸಂದಭರ್ದಲ್ಲಿ ಎಸ್ಪಿ ಉದ್ರಿಕ್ತ ಜನರನ್ನು ಸಮಾಧಾನ ಪಡಿಸಿದರು. ತದ ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಇಲ್ಲಿ ಕೂಡಾ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು.

ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ತಪ್ಪಿತಸ್ಥ ಪೊಲೀಸರನ್ನು ತಕ್ಷಣ ಕೆಲಸದಿಂದ ವಜಾಗಳಿಸಬೇಕು. ಸಚಿವ ರಮಾನಾಥ ರೈ ಇಲ್ಲವೇ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಈ ಬಗ್ಗೆ ರವಸೆ ನೀಡಿದ ಬಳಿಕವೇ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಲಾಗುವುದು ಎಂದು ಪಟ್ಟುಹಿಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜೆಡಿಎಸ್ ಮುಖಂಡ ಹಾರೂನ್ ರಶೀದ್, ಎಸ್‌ಡಿಪಿಐ ಮುಖಂಡ ಶಾಹುಲ್ ಹಮೀದ್, ಪಿಎಫ್‌ಐ ಮುಖಂಡ ಝಕರಿಯಾ ಗೋಳ್ತಮಜಲು ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಉದ್ರಿಕ್ತ ಗ್ರಾಮಸ್ಥರು ಹಾಗೂ ಮೃತರ ಕುಟುಂಬಸ್ಥರನ್ನು ಸಮಾಧಾನಪಡಿಸಿದರು. ಬಳಿಕ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಬಂಟ್ವಾಳ ಉಪ ವಿಬಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಹಾಗೂ ಈ ಬಗ್ಗೆ ಸಚಿವರ ಮೂಲಕ ಸರಕಾರದ ಗಮನ ಸೆಳೆದು ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಭರವಸೆ ನೀಡಿದ ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ಯಲಾಯಿತು.

ಎಸಿ ಭೇಟಿ

ಘಟನೆಯ ಸುದ್ದಿ ತಿಳಿದು ಮಂಗಳೂರು ಸಹಾಯಕ ಆಯುಕ್ತ ರೇಣುಕಾಪ್ರಸಾದ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ರಾಮ ಕೆ., ನವೀನ್ ಹಾಗೂ ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಎಸ್ಪಿ ಭೂಷಣ್‌ರಿಂದ ಮಾಹಿತಿ ಪಡೆದರಲ್ಲದೆ ಶಾಂತಿ ಸಭೆಯನ್ನು ನಡೆಸಿ ಪರಿಸರದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಕಲ್ಲುತೂರಾಟಕ್ಕೆ ಹೆಸರಿ ನದಿಗೆ ಹಾರಿದ ಶರೀಫ್?

ಶರೀಫ್ ನೀರಿಗೆ ಹಾರಿ ಮೃತಪಡಲು ಪೊಲೀಸರೇ ಕಾರಣ ಎಂದು ಆತನ ಮನೆ ಮಂದಿ ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಆತ ಮರಳುಗಾರಿಕೆಯ ಕಾರ್ಮಿಕನಲ್ಲ. ಸ್ನೇಹಿತರೊಂದಿಗೆ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ವೇಳೆ ಏಕಾಏಕಿ ಪೊಲೀಸರು ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ಕಲ್ಲಿನೇಟಿನಿಂದ ತಪ್ಪಿಕೊಳ್ಳಲು ಹೆದರಿ ಶರೀಫ್ ನದಿಗೆ ಹಾರಿದ್ದು ಆತನಿಗೆ ಈಜಲು ತಿಳಿದಿದ್ದರೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಈಜಲಾಗದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಅವರ ಸಹೋದರ ಹಸೈನಾರ್ ತಿಳಿಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ನಾನು ಮತ್ತು ಅಕ್ಕನ ಮಗ ಮನೆ ಸಮೀಪದಲ್ಲಿರುವ ಫಲ್ಗುಣಿ ನದಿ ಬದಿಗೆ ತೆರಳಿದ್ದೆವು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಅಲ್ಲಿದ್ದವರ ಮೇಲೆ ಏಕಾಏಕಿ ಲಾಠಿ ಬೀಸಿದರೆ ತಂಡದಲ್ಲಿದ್ದ ಇಬ್ಬರು ಪೊಲೀಸರು ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದವರು ದಿಕ್ಕು ಪಾಲಾಗಿ ಓಡಿ ಹೋಗಿದ್ದಾರೆ. ನಾನು, ಶರೀಫ್ ಹಾಗೂ ಇನ್ನಿಬ್ಬರು ಪೊಲೀಸರಿಂದ ತಪ್ಪಿಕೊಳ್ಳಲು ನದಿಗೆ ಹಾರಿದ್ದೇವೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ನನಗೆ ಈಜಲಾರದೆ ಅಸ್ವಸ್ಥಗೊಂಡು ಸಹಾಯಕ್ಕಾಗಿ ಪೊಲೀಸರನ್ನು ಕರೆದೆ. ಈ ಸಂದರ್ಭದಲ್ಲಿ ಇನ್ನೊಂದು ಕಡೆ ಶರೀಫ್ ನೀರಿನಲ್ಲಿ ಮುಳುಗುತ್ತಿದ್ದು ಸಹಾಯಕ್ಕಾಗಿ ಪೊಲೀಸರಲ್ಲಿ ಅಂಗಲಾಚುತ್ತಿದ್ದ. ಆದರೆ ಅಲ್ಲೇ ಇದ್ದರೂ ಪೊಲೀಸರು ಆತನನ್ನು ರಕ್ಷಿಸಲು ಮುಂದಾಗದೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಸಾಯಿ ಅನ್ನುತ್ತಿದ್ದರು. ದೂರದಲ್ಲಿ ಜನರು ಇದ್ದರಾದರೂ ಪೊಲೀಸರಿಗೆ ಹೆದರಿ ಯಾರೂ ಹತ್ತಿರ ಬಂದಿಲ್ಲ. ನಾನು ಹೇಗೋ ಈಜಿ ವಾಪಸ್ ದಡ ಸೇರಿದೆ. ಸ್ವಲ್ಪಹೊತ್ತಿನ ಬಳಿಕ ಸ್ಥಳೀಯ ರಿಕ್ಷಾ ಚಾಲಕನೋರ್ವ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಅಸ್ವಸ್ಥಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಝೈನುದ್ದೀನ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಝೈನುದ್ದೀನ್ ಮುತ್ತೂರಿನ ಕ್ಯಾಂಟೀನ್‌ವೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು ಇಂದು ಕೆಲಸಕ್ಕೆ ರಜೆ ಹಾಕಿದ್ದರಿಂದ ನದಿ ಬದಿಗೆ ತೆರಳಿದ್ದ ಎಂದು ಝೈನುದ್ದೀನ್‌ನ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News