ಅಲ್ಪಾವಧಿ ಟೆಂಡರ್ ಮೂಲಕ ಎಂಆರ್‌ಪಿಎಲ್ ರಸ್ತೆ ದುರಸ್ತಿ: ಮೇಯರ್

Update: 2016-10-26 10:36 GMT

ಮಂಗಳೂರು, ಅ.26: ಎಂಆರ್‌ಪಿಎಲ್ ರಸ್ತೆ ದುರಸ್ತಿ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಲ್ಪಾವಧಿ ಟೆಂಡರ್‌ನ ಪ್ರಸ್ತಾಪ ಮಂಡನೆಯಾಗಲಿದೆ ಎಂದು ಪಾಲಿಕೆ ಮೇಯರ್ ಹರಿನಾಥ್ ತಿಳಿಸಿದ್ದಾರೆ.

 ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವತಿಯಿಂದ ಶೇ.30 ಹಾಗೂ ಎಂಆರ್‌ಪಿಎಲ್ ಮತ್ತು ಇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶೇ.70 ಅನುದಾನದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ರಸ್ತೆಯನ್ನು ಎರಡು ವರ್ಷಗಳ ಅವಧಿಗೆ ಟೆಂಡರ್‌ದಾರರೇ ನಿರ್ವವಣೆ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ. ಮುಂದೆ 45 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವ ಯೋಜನೆ ಇದೆ. ಕಾಂಕ್ರೀಟೀಕರಣ ಮಾಡಿದಾಗ ರಸ್ತೆಯಲ್ಲಿ ಕಂಪನಿಗಳ ಘನ ವಾಹನಗಳಿಗಾಗಿ ಟೋಲ್ ಸಂಗ್ರಹ ವ್ಯವಸ್ಥೆಗೆ ಚಿಂತನೆ ನಡೆದಿದೆ. ಈ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು. ನವೆಂಬರ್‌ನಲ್ಲಿ ತುಂಬೆ ಹಳೆ ಡ್ಯಾಮ್‌ಗೆ ಗೇಟ್ ಅಳವಡಿಸಲಾಗುವುದು. ಐದು ಮೀಟರ್ ನೀರು ಸಂಗ್ರಹಕ್ಕೆ ಸಂಬಂಧಿಸಿ 41 ಎಕರೆ ಭೂಮಿ ಮುಳುಗಡೆ ಕುರಿತಂತೆ ಸಮೀಕ್ಷೆ ನಡೆದಿದ್ದು, ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಪರಿಹಾರಕ್ಕೆ 50 ಕೋಟಿ ರೂ.ಗಳನ್ನು ಅಂದಾಜಿಸಲಾಗಿದೆ. ಅಣೆಕಟ್ಟಿನಲ್ಲಿ 7 ಮೀಟರ್‌ವರೆಗೆ ನೀರು ಸಂಗ್ರಹಿಸಲು ಮುಳುಗಡೆಯಾಗುವ ಪ್ರದೇಶದ ಜನರಿಗೆ ಒಟ್ಟು 250 ಕೋಟಿ ರೂ.ಗಳ ಪರಿಹಾರದ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು. ನಗರದಲ್ಲಿರುವ 85 ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೇ ಸಮಸೆಗಳಾಗುವ ಕುರಿತಾಗಿ ಪ್ರತಿಕ್ರಿಯಿಸಿದ ಮೇಯರ್, ಕೆಲವು ಕಟ್ಟಡಗಳು ಅಕ್ರಮ ಸಕ್ರಮಗಳಿಗೆ ಮತ್ತು ಕೆಲವೊಂದು ಕಟ್ಟಡಗಳ ಮಾಲಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗಾಗಿ ಮುಂದಿನ ಹತ್ತು ದಿನಗಳೊಳಗಾಗಿ ರಸ್ತೆ ಸುರಕ್ಷತಾ ಸಭೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News