ಪುತ್ತೂರು ಸಂತೆ ವಿಚಾರದಲ್ಲಿ ಶಾಸಕರು ಮೌನ ಮುರಿಯಲಿ: ರಾಜೇಶ್ ಬನ್ನೂರು

Update: 2016-10-26 12:20 GMT

ಪುತ್ತೂರು, ಅ.26: ಪುತ್ತೂರಿನ ಸಂತೆ ಸ್ಥಳಾಂತರದ ಬಳಿಕ ಇಲ್ಲಿನ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ಸಂತೆಯನ್ನು ಕಿಲ್ಲೆ ಮೈದಾನದಲ್ಲೇ ಮಾಡಲಿ, ಇಲ್ಲಿನ ಅಧಿಕಾರಿಗಳ ದಬ್ಬಾಳಿಕೆಯ ವಿರುದ್ಧ ಶಾಸಕರು ಮೌನವಾಗಿರುವುದು ಸರಿಯಲ್ಲ. ಶಾಸಕರು ಸಂತೆ ಸ್ಥಳಾಂತರದ ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಹೇಳಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರದೋ ಲಾಭಕ್ಕಾಗಿ ಬಡ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಿದ್ದಾರೆ. ಅದೆಷ್ಟೋ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಸಂತೆಯನ್ನು ಯಾವ ಕಾರಣಕ್ಕೆ ಉಪವಿಭಾಗಾಧಿಕಾರಿ ಸ್ಥಳಾಂತರ ಮಾಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು. ಇಲ್ಲಿನ ಅಧಿಕಾರಿಗಳ ದರ್ಬಾರ್‌ಗೆ ಶಾಸಕಿ ನಲುಗಿದ್ದಾರೆ ಎಂದರು.

ಎಲ್ಲಾ ಕಡೆಗಳಲ್ಲಿ ಜನಪ್ರತಿನಿಧಿಗಳ ದರ್ಬಾರಿಗೆ ಅಧಿಕಾರಿಗಳು ಕಂಗಾಲಾದರೆ ಪುತ್ತೂರಿನಲ್ಲಿ ಅದಕ್ಕೆ ವಿರುದ್ಧವಾಗಿದೆ. ಜನರ ಮೇಲೆ ಅಧಿಕಾರಿಗಳು ದರ್ಬಾರ್ ಮಾಡಿದರೆ ಜನಪ್ರತಿನಿಧಿಗಳು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಂತೆ ವ್ಯಾಪಾರದಲ್ಲೇ ಬದುಕು ಸಾಗಿಸುತ್ತಿರುವ ಮಂದಿಗೆ ಬದುಕೇ ಇಲ್ಲದಾಗಿದೆ. ಈ ಬಗ್ಗೆ ಶಾಸಕರು ರಂಗಕ್ಕಿಳಿದು ಮಾತನಾಡಿದರೆ ಎಲ್ಲವೂ ಸರಿಯಾಗಬಹುದು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News