ಸಕಾಲದಲ್ಲಿ ಆ್ಯಂಬುಲೆನ್ಸ್ ಲಭಿಸದೆ ಅಲಿಗಡ ವಿವಿಯ ಹಿರಿಯ ಪ್ರೊಫೆಸರರ ಸಾವು
ಅಲಿಗಡ, ಅ.26: ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಹಿರಿಯ ಪ್ರೊಫೆಸರ್ ಒಬ್ಬರು ಸಕಾಲದಲ್ಲಿ ಆ್ಯಂಬುಲೆನ್ಸ್ ಲಭ್ಯವಾಗದ ಕಾರಣ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
64ರ ಹರೆಯದ ಡಿ. ಮೂರ್ತಿ ಎಂಬ ಈ ಪ್ರೊಫೆಸರ್ ಕ್ಯಾನ್ಸರ್ ರೋಗಿಯಾಗಿದ್ದರು. ರವಿವಾರ ಶಸ್ತ್ರಚಿಕಿತ್ಸೆಯೊಂದರ ಬಳಿಕ ಅವರ ಪರಿಸ್ಥಿತಿ ತೀರಾ ಹದಗೆಟ್ಟ ಕಾರಣ, ವಿವಿ ಆವರಣದ ಆಸ್ಪತ್ರೆಯ ವೈದ್ಯರು ಮೂರ್ತಿಯವರನ್ನು ದಿಲ್ಲಿಗೆ ಕೊಂಡೊಯ್ಯುವಂತೆ ನಿನ್ನೆ ಸಲಹೆ ನೀಡಿದ್ದರು.
ಆದರೆ, ದಾಖಲೆ ತಯಾರಿಸಬೇಕಾದ ಕಾರಣದಿಂದ ಆ್ಯಂಬುಲೆನ್ಸ್ ಒಂದನ್ನು ಸಕಾಲದಲ್ಲಿ ವ್ಯವಸ್ಥೆಗೊಳಿಸಲಾಗಿಲ್ಲ. ಇದು ಸಮಿತಿಯೊಂದು ತನಿಖೆ ನಡೆಸಿದ ವೇಳೆ ತಿಳಿದುಬಂದಿದೆ. ಅದು ವೈದ್ಯರಿಂದ ಅಗಿರಲಿ ಅಥವಾ ಆಸ್ಪತ್ರೆಯಿಂದ ಆಗಿರಲಿ ಅಥವಾ ವಿವಿಯಿಂದಲೇ ಆಗಿರಲಿ. ಅದು ತಮ್ಮ ಕರ್ತವ್ಯವಾಗಿದೆ ಹಾಗೂ ಅದನ್ನು ತಾವು ಮಾಡಲಿದ್ದೇವೆಂದು ವಿವಿಯ ವಕ್ತಾರ ಉಮರ್ ಎಸ್. ಪೀರ್ ಜಾದಾ ತಿಳಿಸಿದ್ದಾರೆ.
ಪ್ರೊ. ಮೂರ್ತಿ ಜೀವರಕ್ಷಕ ವ್ಯವಸ್ಥೆಯಲ್ಲಿದ್ದರು ಹಾಗೂ ಪ್ರತಿ ಕ್ಷಣವೂ ಗಂಭೀರವಾಗಿತ್ತು. ವಿಶೇಷ ಸಲಕರಣೆಗಳಿರುವ ಆ್ಯಂಬುಲೆನ್ಸ್‌ನಲ್ಲಷ್ಟೇ ಅವರನ್ನು ದಿಲ್ಲಿಗೆ ಕೊಂಡೊಯ್ಯಬೇಕಿತ್ತು.
ಅವರನ್ನು ದಿಲ್ಲಿಗೆ ಕರೆದೊಯ್ಯುವಂತೆ ತಾವು ಸಲಹೆ ನೀಡಿದ ಹಲವು ತಾಸುಗಳ ಬಳಿಕವು ಆ್ಯಂಬುಲೆನ್ಸ್ ಲಭ್ಯವಾಗಲಿಲ್ಲವೆಂದು ವಿವಿಯ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಸರ್ಜರಿ ವಿಭಾಗದ ಅಧ್ಯಕ್ಷ ಮುಹಮ್ಮದ್ ಅಸ್ಲಂ ತಿಳಿಸಿದರು.
ಪ್ರೊ. ಮೂರ್ತಿ ವಿವಿಯಲ್ಲಿ ಆಧುನಿಕ ಭಾರತೀಯ ಭಾಷೆಗಳ ವಿಭಾಗದ ಮುಖ್ಯಸ್ಥರಾಗಿದ್ದರು.