ನನ್ನ ಉಚ್ಚಾಟನೆ ಅಭೂತಪೂರ್ವ: ಮಿಸ್ತ್ರಿ
ಹೊಸದಿಲ್ಲಿ, ಅ.26: ತನ್ನನ್ನು ಉಚ್ಚಾಟಿಸಿರುವ ಕ್ರಮದಿಂದ ತನಗೆ ಆಘಾತವಾಗಿದೆ. ಈ ಕುರಿತಾಗಿ ಆಡಳಿತ ಮಂಡಳಿಯು ಗೌರವಯುತವಾಗಿ ನಡೆದುಕೊಂಡಿಲ್ಲ. ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶವನ್ನೇ ನೀಡಿಲ್ಲವೆಂದು ಸೋಮವಾರ ಟಾಟಾ ಗುಂಪಿನ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ಅರ್ಧಚಂದ್ರ ಪ್ರಯೋಗಕ್ಕೊಳಗಾಗಿರುವ ಸೈರಸ್ ಮಿಸ್ತ್ರಿ ಆಡಳಿತ ಮಂಡಳಿಯ ಸದಸ್ಯರಿಗೆ ಮಾಡಿರುವ ಇ-ಮೇಲೊಂದರಲ್ಲಿ ಆರೋಪಿಸಿದ್ದಾರೆ.
ಮಿಸ್ತ್ರಿ ಕೈಗೊಳ್ಳಬಹುದಾದ ಯಾವುದೇ ಕಾನೂನು ಕ್ರಮದ ವಿರುದ್ಧ ಮುನ್ನೆಚ್ಚರಿಕೆಯಾಗಿ ಟಾಟಾ ಗುಂಪು ಕೇವಿಯಟ್‌ಗಳನ್ನು ದಾಖಲಿಸಿದ್ದು, ಹಲವು ನ್ಯಾಯಾಲಯಗಳಲ್ಲಿ ಕ್ರಮ ಕೈಗೊಂಡಿದೆ.
ತನ್ನ ಉಚ್ಚಾಟನೆಯನ್ನು ಭಾರತದಲ್ಲಿಯೇ ‘ಅಭೂತಪೂರ್ವ’ ಕ್ರಮವೆಂದು ಮಿಸ್ತ್ರಿ ವ್ಯಾಖ್ಯಾನಿಸಿದ್ದಾರೆ. ಈ ಹಂತದಲ್ಲಿ ಮಿಸ್ತ್ರಿ ಕಾನೂನು ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಿಲ್ಲವೆಂದು ಅವರ ಕಚೇರಿ ತಿಳಿಸಿದೆ.
100 ಶತಕೋಟಿ ಡಾಲರ್ ಆಸ್ತಿಯಿರುವ ಟಾಟಾಗುಂಪಿನ ಆಡಳಿತ ಮಂಡಳಿಯಲ್ಲಿ 9 ಮಂದಿ ಸದಸ್ಯರಿದ್ದಾರೆ. ಅವರಲ್ಲಿ 6 ಮಂದಿ ಮಿಸ್ತ್ರಿಯವರನ್ನು ವಜಾಗೊಳಿಸುವ ಪರ ಮತ ನೀಡಿದ್ದರೆ, ಇಬ್ಬರು ಗೈರು ಹಾಜರಾಗಿದ್ದರು. ನಿಯಮದಂತೆ ಮಿಸ್ತ್ರಿಯವರಿಗೆ ಮತದಾನ ಮಾಡುವ ಅವಕಾಶವಿರಲಿಲ್ಲ.
ಬ್ರಿಟನ್‌ನಲ್ಲಿರುವ ಕಂಪೆನಿಯ ಉಕ್ಕು ಘಟಕಗಳು ಸೇರಿದಂತೆ ಗುಂಪಿನ ಸ್ಥಾಪಕರು ಗಳಿಸಿರುವ ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರವು ಮಂಡಳಿಗೆ ಸರಿಯೆಂದು ಕಾಣಲಿಲ್ಲ. ಅದರಿಂದ ಕಂಪೆನಿಯ ಅಚಲ ಗೌರವಕ್ಕೆ ಅಂತಾರಾಷ್ಟ್ರೀಯವಾಗಿ ಹಾನಿಯಾಗುವುದೆಂದು ಅದು ಭಾವಿಸಿತೆಂದು ಟಾಟಾ ಗುಂಪಿನ ಸುದೀರ್ಘ ಕಾಲದ ಕಾನೂನು ಸಲಹೆಗಾರ ಹರೀಶ್ ಸಾಳ್ವೆ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಮಿಸ್ತ್ರಿಯವರನ್ನು ಉಚ್ಚಾಟಿಸುವ ಮೊದಲು ಅವರನ್ನು ಖಾಸಗಿಯಾಗಿ ಭೇಟಿಯಾಗಿದ್ದ ರತನ್ ಟಾಟಾ, ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದರು. ಅದರೆ ಅದನ್ನು, ಮಿಸ್ತ್ರಿ ತಿರಸ್ಕರಿಸಿದ್ದರೆಂದು ಅವರ ಉಚ್ಚಾಟನೆಯ ಕುರಿತು ಮಂಡಳಿಗೆ ಕಳೆದೊಂದು ತಿಂಗಳಿಂದ ಕಾನೂನು ಸಲಹೆ ನೀಡುತ್ತಿದ್ದ ಮೋಹನ್ ಪರಾಶರನ್ ನಿನ್ನೆ ಹೇಳಿದ್ದರು.