ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ ಅಮೂರ್ತವಾಗಿ ಇರುತ್ತದೆ: ಬಾಲನ್ ನಂಬಿಯಾರ್
ಮಂಗಳೂರು,ಅ.26: ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ ಅಮೂರ್ತವಾಗಿ ಇರುತ್ತದೆ. ತನಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಾಗ ಆತ ಒಬ್ಬ ಕಲಾವಿದ, ಸಂಗೀತಕಾರ, ನೃತ್ಯ ಪಟು, ವಿನ್ಯಾಸಕಾರ ಆಗಬಹುದು ಎಂದು ಖ್ಯಾತ ಕಲಾವಿದ, ದಿಲ್ಲಿಯ ಲಲಿತ ಕಲಾ ಅಕಾಡಮಿಯ ಮಾಜಿ ಅಧ್ಯಕ್ಷ ಬಾಲನ್ ನಂಬಿಯಾರ್ ತಿಳಿಸಿದ್ದಾರೆ.
ಇನೋಳಿ ಬಿಐಟಿ ಆವರಣದಲ್ಲಿರುವ ಬೀಡ್ಸ್ (ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್)ನಲ್ಲಿ ಸೋಮವಾರದಿಂದ ಬುಧವಾರದವರೆಗೆ ನಡೆದ ಬೇಸಿಕ್ ಡಿಸೈನ್ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಾಲ್ಯದಲ್ಲಿ ಮನೆ, ಕುಟುಂಬದ ವಾತಾವರಣ, ಶಾಲೆ, ಶಿಕ್ಷಕರು, ಸವಲತ್ತುಗಳು ಹಾಗೂ ದೊರೆತ ಅವಕಾಶಗಳು ಪ್ರತಿಭೆಯ ಸೃಜನಶೀಲ ಅಭಿವ್ಯಕ್ತಿಗೆ ಸಹಾಯವಾಗುತ್ತದೆ. ವ್ಯಕ್ತಿ ಪ್ರತಿಕೂಲ ವಾತಾವರಣದಲ್ಲಿ ಬೆಳೆದರೆ ಆತನ ಪ್ರತಿಭೆಯ ಪ್ರದರ್ಶನಕ್ಕೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ಕಲಾವಿದ ಬಾಲನ್ ನಾಯರ್ ತಿಳಿಸಿದರು.
ಒಂದು ಉತ್ತಮ ಕಲಾಕೃತಿ ಮೂಡಿಬರಬೇಕಾದರೆ ಕಲಾವಿದನೊಬ್ಬ ಪರಿಶ್ರಮಪಡಬೇಕು. ಅದರ ನೀಲನಕಾಶೆ ತಯಾರಿಸಲು ಹೆಚ್ಚು ಪರಿಶ್ರಮ ಪಟ್ಟಷ್ಟು ಉತ್ತಮ ಕೃತಿ ಮೂಡಿ ಬರಬಹುದು. ಕಲಾವಿದನೊಬ್ಬ ತನಗೆ ದೊರೆತ ಕನಿಷ್ಠ ಸೌಲಭ್ಯಗಳಲ್ಲಿಯೂ ತನ್ನ ಪ್ರತಿಭೆ, ಕೌಶಲ್ಯ ಮತ್ತು ಅನುಭವದಿಂದ ಉತ್ತಮ ಕೃತಿ ರಚಿಸಲು ಸಾಧ್ಯ. ಬೀಡ್ಸ್‌ನ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಉತ್ಸಾಹ ಕಂಡು ಸಂತಸವಾಗಿದೆ ಎಂದು ಕಲಾವಿದ ಬಾಲನ್ ನಾಯರ್ ತಿಳಿಸಿದರು.
ಬೀಡ್ಸ್‌ನ ಪ್ರಾಂಶುಪಾಲ ಭವೇಶ್ ಮೆಹ್ತಾ, ಕಲಾವಿದೆ ಅವೆಲಿನಾ, ಡಾ.ಅಖ್ತರ್ ಹುಸೈನ್ ಹಾಗೂ ಬೀಡ್ಸ್‌ನ ಉಪನ್ಯಾಸಕ ಕರೀಂ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ಪ್ರದರ್ಶಿಸಿದರು. ಕೊನೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.