×
Ad

‘ಭಾವೈಕ್ಯದ ದೀಪಾವಳಿ’ ನಡೆಸಲು ಬಿಡುವುದಿಲ್ಲ: ವಿಹಿಂಪ

Update: 2016-10-26 19:17 IST

ಮಂಗಳೂರು, ಅ.26:ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಅ.29 ರಂದು ಕದ್ರಿ ದೇವಸ್ಥಾನದಲ್ಲಿ ನಡೆಸಲುದ್ದೇಶಿಸಿರುವ ಭಾವೈಕ್ಯದ ದೀಪಾವಳಿ ಕಾರ್ಯಕ್ರಮ ಧಾರ್ಮಿಕ ದತ್ತಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.

ನಗರದ ಕದ್ರಿಯ ವಿಹಿಂಪ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಿಂದ ಅಶಾಂತಿ ಸೃಷ್ಟಿಯಾಗಲಿರುವುದರಿಂದ ಸಂಬಂಧಿತರು ಕೂಡಲೇ ಕಾರ್ಯಕ್ರಮವನ್ನು ನಿರ್ಬಂಧಿಸಬೇಕು. ಧಾರ್ಮಿಕ ಶ್ರದ್ಧಾಕೇಂದ್ರವನ್ನು ದುರುಪಯೋಗಪಡಿಸುವ ಕೃತ್ಯವಾಗಿದ್ದು ಇದನ್ನು ಹಿಂದೂ ಸಮಾಜ ವಿರೋಧಿಸುವುದಾಗಿ ಹೇಳಿದರು.

ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಅನ್ಯಮತೀಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲುದ್ದೇಶಿಸಲಾಗಿದೆ. ಇದರಿಂದಾಗಿ ದೇವಸ್ಥಾನದ ಆಚಾರವಿಚಾರಗಳಿಗೆ ಚ್ಯುತಿ ಬರುವುದರೊಂದಿಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗಲಿದೆ. ಕದ್ರಿ ಕ್ಷೇತ್ರ ಹಿಂದುಗಳಿಗೆ ಸೇರಿದ್ದು. ರಾಜಕೀಯ ದೊಂಬರಾಟಕ್ಕಾಗಿ ಈ ರೀತಿಯ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು ಸರಿಯಲ್ಲ. ಇದರ ಹಿಂದೆ ಅಸಹಿಷ್ಣುತೆ ಇದೆ ಎಂಬುದನ್ನು ಬಿಂಬಿಸುವ ಪ್ರಯತ್ನವಿದೆ. ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುವ ಇರಾದೆ ಯಾರಿಗಾದರೂ ಇದ್ದಲ್ಲಿ ಅವರು ಬೇಗ ತಮ್ಮನ್ನು ತಾವು ಸರಿಪಡಿಸಿಕೊಳ್ಳುವುದೊಳಿತು ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ಹಿಂದೂ ಶ್ರದ್ಧಾಕೇಂದ್ರಗಳಲ್ಲಿ ರಾಜಕೀಯ ವ್ಯಕ್ತಿಗಳು ವ್ಯವಹರಿಸಲು ಬಿಡುವುದಿಲ್ಲ. ಕದ್ರಿ ಕ್ಷೇತ್ರ ಹಿಂದೂಗಳಿಗೆ ಮಾತ್ರ ಸೀಮಿತವಾದುದು ಹೊರತು ಅನ್ಯಮತೀಯರಿಗಲ್ಲ. ಈ ರೀತಿ ಯಾವುದೇ ಹಿಂದೂ ದೇವಸ್ಥಾನಗಳಲ್ಲಿ ಇಂತಹ ಚಟುವಟಿಕೆ ನಡೆದಿದ್ದಿಲ್ಲ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ರಾಜಕೀಯ ಪಕ್ಷ ಮತ್ತು ಪಕ್ಷದ ಮುಂದಾಳುಗಳು ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ಈ ನಡೆ ಧಾರ್ಮಿಕ ದತ್ತಿ ಕಾನೂನಿಗೆ ವಿರುದ್ಧವಾಗಿದೆ ಎಂದ ಅವರು, ಕಳೆದ ಬಾರಿ ಪುತ್ತೂರು ದೇಗುಲದ ಆಮಂತ್ರಣ ಪತ್ರಿಕೆ ವಿವಾದದ ಕಾನೂನು ಹೋರಾಟವನ್ನು ನೆನಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ವಿಹಿಂಪ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗದಳ ಜಿಲ್ಲಾ ಸಂಯೋಜಕ ಭುಜಂಗ ಕುಲಾಲ್, ಮಂಗಳೂರು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಕಿಶೋರ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ಡಾ.ವೈ. ಭರತ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News